ತುಮಕೂರು: ಯೋಗ ಮಾಡುವುದರಿಂದ ಸದೃಢತೆ, ಏಕಾಗ್ರತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಇಂದಿನ ಯುವಜನತೆ ಯೋಗದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಯೋಗಪಟು ರಾಜೇಶ್ ಆಚಾರ್ ಹೇಳಿದರು.
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಸೋಮವಾರ ಹಮ್ಮಿಕೊಂಡಿದ್ದ ಅಂತರಕಾಲೇಜು ಸಾಂಪ್ರದಾಯಿಕ, ಕಲಾತ್ಮಕ ಮತ್ತು ಲಯಬದ್ಧ ಯೋಗದ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದರು.
ಯೋಗ ಮಾಡಲು ಕಡಿಮೆ ವೆಚ್ಚ ಸಾಕು. ಒಂದು ಮ್ಯಾಟ್. ಪರಿಶುದ್ಧ ವಾತಾವರಣ– ಇವಿಷ್ಟಿದ್ದರೆ ಗುರುಗಳ ಮಾರ್ಗದರ್ಶನದೊಂದಿಗೆ ಉತ್ತಮ ಯೋಗಾಭ್ಯಾಸ ಮಾಡಬಹುದು. ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಪ್ರಾಧ್ಯಾಪಕರಾದ ಪ್ರೊ.ಶ್ರೀನಿವಾಸ್ ಎಸ್. ಮಾತನಾಡಿ, ಈಚಿನ ದಿನಗಳಲ್ಲಿ ಮನುಷ್ಯನಿಗೆ ಹೆಚ್ಚು ಕಾಯಿಲೆಗಳು ಬರುವುದಕ್ಕೆ ನಮ್ಮ ಕಳಪೆ ಆಹಾರ ಪದ್ಧತಿಯೇ ಕಾರಣ. ಮಕ್ಕಳು ಜಂಕ್ ಫುಡ್ ಗೆ ಆಕರ್ಷಿತರಾಗಿದ್ದಾರೆ. ಮಾರುಕಟ್ಟೆಯಲ್ಲಿ ಉತ್ಪಾದನೆಯಾಗುವ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಆದರೆ ಅದರ ಹಿಂದೆ ಕೊಟ್ಟಿರುವಂತಹ ವಿವರಗಳನ್ನು ನಾವು ಓದುವುದಿಲ್ಲ. ನಾವು ಭಾವಿಸಿದಂತೆ ಸಿದ್ಧ ಆಹಾರಗಳೆಲ್ಲವೂ ಶ್ರೇಷ್ಠವಲ್ಲ. ಅವುಗಳಲ್ಲಿ ಹೆಚ್ಚಿನ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಆದ್ದರಿಂದ ನಾವು ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನು ನಿರ್ಧರಿಸುವ ಸಾಮರ್ಥ್ಯವಿರಬೇಕು ಎಂದರು.
ಪ್ರಾಧ್ಯಾಪಕರಾದ ಡಾ.ಶಾಲಿನಿ ಬಿ.ಆರ್. ಮಾತನಾಡಿ, ವಿದ್ಯಾರ್ಥಿಗಳು ಕೇವಲ ತರಗತಿಗಳಿಗೆ ಸೀಮಿತವಾಗದೆ, ಪ್ರತಿದಿನ ಒಂದು ಗಂಟೆಯನ್ನಾದರೂ ಯೋಗಕ್ಕೆ ಮೀಸಲಿಡಬೇಕು. ಪ್ರತಿದಿನ ಅರ್ಧ ಗಂಟೆ ಧ್ಯಾನ ಮಾಡಬೇಕು. ಸೂರ್ಯ ನಮಸ್ಕಾರ ಮಾಡುವುದರಿಂದ ಉತ್ತಮ ಆರೋಗ್ಯ ಸಾಧ್ಯ. ಆರೋಗ್ಯಯುತ ಜೀವನಶೈಲಿಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಎಂ. ಶೇಟ್ ಮಾತನಾಡಿ, ನಮ್ಮ ದೇಹಕ್ಕೆ ಬೇಕಾದ ಆಹಾರವನ್ನು ಮಾತ್ರ ಸೇವಿಸಬೇಕು. ಅನಗತ್ಯ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಹದಗೆಡುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಜಿಮ್ ಗೆ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಆದರೆ ಯೋಗವನ್ನು ಅಭ್ಯಾಸ ಮಾಡುವುದರಿಂದ ಮಿತವ್ಯಯದಲ್ಲಿ ಮನೆಯಲ್ಲೇ ಉತ್ತಮ ಆರೋಗ್ಯ ರೂಢಿಸಿಕೊಳ್ಳಬಹುದು ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ. ಎ.ಎಂ. ಮಂಜುನಾಥ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4