ಕೊರಟಗೆರೆ : ಇಂದಿನ ಯುವಜನತೆ ಅನಾವಶ್ಯಕ ವಿಷಯಗಳಲ್ಲಿ ತೊಡಗಿಕೊಳ್ಳುವುದರಿಂದ ತಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಜೀವನದ ಗುರಿಯನ್ನು ಅರಿತು, ಉತ್ತಮ ಭವಿಷ್ಯ ಮತ್ತು ಸಮಾಜ ನಿರ್ಮಾಣಕ್ಕೆ ಅಗತ್ಯವಾದ ವಿಷಯಗಳತ್ತ ಕೇಂದ್ರೀಕರಿಸಬೇಕು, ಎಂದು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ತಿಳಿಸಿದರು.
ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದಲ್ಲಿ ಬೆಂಗಳೂರಿನ ವಿವೇಕಾನಂದ ಮಹಿಳಾ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾತನಾಡಿದರು.
ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ತಮ್ಮ ಜೀವನವನ್ನೇ ಮುಡುಪಾಗಿಡುತ್ತಾರೆ, ಅವರ ತ್ಯಾಗದ ಬೆಲೆ ಮಕ್ಕಳಿಗೆ ಅರಿವಾಗಬೇಕು, ಯಾವುದೇ ಅಡ್ಡದಾರಿಗಳನ್ನೂ ತುಳಿಯದೆ, ಶ್ರದ್ಧೆ, ಶ್ರಮ ಮತ್ತು ನೈತಿಕತೆಯಿಂದ ಓದಬೇಕು. ನಿಜವಾದ ಶಿಕ್ಷಣ ಎಂದರೆ ಕೇವಲ ಪುಸ್ತಕದ ಅಕ್ಷರಗಳಲ್ಲ, ಅದು ವ್ಯಕ್ತಿತ್ವದ ಬೆಳವಣಿಗೆಯ ಮಾರ್ಗವಾಗಿದ್ದು ಇದನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣವು ರಾಷ್ಟ್ರದ ಪ್ರಗತಿಯ ಮೂಲ. ಹೆಣ್ಣೊಂದು ಕಲಿತರೆ ಮನೆ, ಶಾಲೆ, ಸಮಾಜ ಎಲ್ಲವೂ ಬೆಳಗುತ್ತದೆ, ಕಾಲೇಜಿನಲ್ಲಿ ಓದುತ್ತಿರುವ ಪ್ರತಿಯೊಬ್ಬ ಹೆಣ್ಣು ವಿದ್ಯಾರ್ಥಿನಿಯೂ ನಾಳೆಯ ಭಾರತದ ಆಸ್ತಿಯಾಗಬೇಕು. ನಿಮ್ಮೊಳಗಿರುವ ಶಕ್ತಿ ಮತ್ತು ಬುದ್ಧಿ ದೇಶದ ಅಭಿವೃದ್ಧಿಗೆ ಉಪಯೋಗವಾಗಲಿ. ಸಾಮಾಜಿಕ ಸೇವೆ ಮತ್ತು ಶಿಕ್ಷಣ ಒಂದಾಗಿ ಬಂದಾಗ ಮಾತ್ರ ನಿಜವಾದ ಸಾಂಸ್ಕೃತಿಕ ಪುನರುತ್ಥಾನ ಸಾಧ್ಯ ಎಂದರು.
ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ಮಾತನಾಡಿ ಸಂಸ್ಕೃತಿ ಎಂದರೆ ಕೇವಲ ಶ್ಲೋಕಗಳ ಪಠಣವಲ್ಲ, ಅದು ಮಾನವೀಯತೆ, ವಿನಯ, ಶಾಂತಿ, ಮತ್ತು ಪರೋಪಕಾರದ ಮೌಲ್ಯಗಳಲ್ಲಿ ಅಡಕವಾಗಿದೆ, ಇಂದಿನ ಯುವಕರು ಆಧ್ಯಾತ್ಮ ಮತ್ತು ವಿಜ್ಞಾನವನ್ನು ಸಮತೋಲನದಲ್ಲಿಟ್ಟುಕೊಂಡು ಬದುಕಲು ಕಲಿಯಬೇಕು, ವಿವೇಕಾನಂದರು ಹೇಳಿದಂತೆ, ‘ಯುವ ಶಕ್ತಿ’ ರಾಷ್ಟ್ರದ ಬೆನ್ನೆಲುಬು ಯುವಜನತೆ ತಮ್ಮ ಒಳಗಿನ ಶಕ್ತಿಯನ್ನು ಗುರುತಿಸಿ, ಸಮಾಜದ ಹಿತದತ್ತ ಪ್ರಯೋಗಿಸಿದರೆ, ಭಾರತ ಮತ್ತೊಮ್ಮೆ ಜಗತ್ತಿಗೆ ದಾರಿ ತೋರಿಸಬಲ್ಲದು ಎಂದು ಸಂದೇಶ ನೀಡಿದರು
ಸಮಾರೋಪ ಸಮಾರಂಭದದಲ್ಲಿ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಅದೇ ರೀತಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಎಲೆರಾಂಪುರ ಗ್ರಾ.ಪಂ ಅಧ್ಯಕ್ಷೆ ಗೀತಾ ನರಸಿಂಹರಾಜು, ಕಾಲೇಜಿನ ಪ್ರಾಂಶುಪಾಲರಾದ ತ್ರಿವೇಣಿ, ವಾಣಿ. ಸಂಸ್ಕೃತ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ನ ಮಾಜಿ ಸದಸ್ಯ ಡಾ.ನಂಜುಂಡಯ್ಯ, ಕೆ.ಆರ್.ಪೇಟೆಯ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕ ಡಾ. ಕುಮಾರಸ್ವಾಮಿ, ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ನಿರ್ದೇಶಕ ನಂಜೇಗೌಡ ನಂಜುಂಡ, ಮಠದ ವ್ಯವಸ್ಥಾಪಕ ಗೋವಿಂದರಾಜು, ಸಂತೋಷ್ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಯರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪೋಷಕರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


