ಜಗಿತ್ತಲ: ಮೂವರು ಸ್ನೇಹಿತೆಯರು ಒಂದೇ ದಿನ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ತೆಲಂಗಾಣದ ಜಗಿತ್ತಲ ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
19 ವರ್ಷ ವಯಸ್ಸಿನ ಗಂಗಾಜಲ, 19 ವರ್ಷದ ಮಲ್ಲಿಕಾ ಮತ್ತು 16 ವರ್ಷ ವಯಸ್ಸಿನ ವಂದನಾ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಈ ಮೂವರು ಕೂಡ ಸಂಬಂಧಿಕರಾಗಿದ್ದು, ಸಣ್ಣ ವಯಸ್ಸಿನಿಂದಲೇ ಸ್ನೇಹಿತೆಯರಾಗಿದ್ದರು ಎನ್ನಲಾಗಿದೆ.
ಗಂಗಾಜಲ ಮತ್ತು ಮಲ್ಲಿಕಾಗೆ ಕಳೆದ ಆಗಸ್ಟ್ ನಲ್ಲಿ ಮದುವೆಯಾಗಿತ್ತು. ವಂದನಾ ಓದು ಮುಂದುವರಿಸಿದ್ದಳು. ಈ ಪೈಕಿ ಮಲ್ಲಿಕಾ ಅನಾರೋಗ್ಯದಿಂದ ಬಳಲುತ್ತಿದ್ದಳು. ಮತ್ತು 10 ದಿನಗಳ ಹಿಂದೆಯಷ್ಟೇ ಆಕೆ ವೈದ್ಯಕೀಯ ಪರೀಕ್ಷೆ ಬರೆಯಲು ತವರಿಗೆ ಬಂದಿದ್ದಳು. ಗಂಗಾಜಲ ಕೂಡ ವಾರದ ಹಿಂದೆ ತವರಿಗೆ ಬಂದಿದ್ದಳು.
ಬುಧವಾರ ಸಂಜೆ ಇವರು ಮೂವರು ಕೂಡ ಶಾಪಿಂಗ್ ಗೆ ಎಂದು ಮನೆಯಲ್ಲಿ ಹೇಳಿ ತೆರಳಿದ್ದರು. ಆದರೆ, ರಾತ್ರಿಯಾದರೂ ಮನೆಗೆ ತಲುಪದ ಕಾರಣ ಕುಟುಂಬಸ್ಥರು ಆತಂಕಕ್ಕೀಡಾದರು. ಮರುದಿನ ಬೆಳಗ್ಗೆ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ತೀವ್ರ ಹುಡುಕಾಟದ ಬಳಿಕ ಧರ್ಮಸಮುದ್ರಂ ಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಇವರ ಸಾವಿಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಆದರೆ, ಮಲ್ಲಿಕಾ ಅನಾರೋಗ್ಯದಿಂದ ಬೇಸತ್ತು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಸ್ನೇಹಿತೆಯರು ರಕ್ಷಿಸಲು ಹೋಗಿದ್ದರಿಂದ ಮೂವರು ಕೂಡ ಸಾವಿಗೀಡಾಗಿರಬಹುದು ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ತಮ್ಮ ಮಕ್ಕಳನ್ನು ಕಳೆದುಕೊಂಡು ಪೋಷಕರು ಕಣ್ಣೀರಿಡುತ್ತಿದ್ದಾರೆ.