ದಾವಣಗೆರೆ: ನಿಧಿಯ ಆಸೆಗೆ ವೈದ್ಯನೋರ್ವ ತನ್ನ ಪತ್ನಿಯನ್ನೇ ಹತ್ಯೆ ಮಾಡಿರುವ ವಿಚಾರ ಘಟನೆ ನಡೆದು 9 ತಿಂಗಳ ಬಳಿಕ ಬೆಳಕಿಗೆ ಬಂದಿದ್ದು, ಪತ್ನಿಗೆ ಹೈಡೋಸ್ ಚುಚ್ಚುಮದ್ದು ನೀಡಿ ಹತ್ಯೆ ಮಾಡಿರುವುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಬೆಳಗುತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ಡಾ.ಚನ್ನೇಶಪ್ಪ ಎಂಬಾ ಬಂಧಿತ ಆರೋಪಿಯಾಗಿದ್ದಾನೆ. 38 ಎಕರೆ ಜಮೀನು ಹೊಂದಿದ್ದ ಶ್ರೀಮಂತನಾಗಿರುವ ಈತ ಕುಡಿತ, ಕ್ಯಾಸಿನೋ ಜೂಜಾಟದ ಚಟ ಅಂಟಿಸಿಕೊಂಡಿದ್ದ ಎನ್ನಲಾಗಿದೆ.
18 ವರ್ಷಗಳ ಹಿಂದೆ ಶಿಲ್ಪಾ ಎಂಬವರನ್ನು ಈತ ಮದುವೆಯಾಗಿದ್ದ. ಮದುವೆಯ ಸಮಯದಲ್ಲಿ 700 ಗ್ರಾಂ ಚಿನ್ನ, 1 ಕೆ.ಜಿ.ಬೆಳ್ಳಿ, 7 ಲಕ್ಷ ನಗದು ವರದಕ್ಷಿಣೆ(Dowry) ನೀಡಲಾಗಿತ್ತು. ಸಾಕಷ್ಟು ಆಸ್ತಿ ಹಣವಿದ್ದರೂ ಡಾ.ಚನ್ನೇಶಪ್ಪಗೆ ಹಣ ಆಸ್ತಿ ಹುಚ್ಚು ಹೆಚ್ಚಿತ್ತು ಎನ್ನಲಾಗಿದೆ. ವರದಕ್ಷಿಣೆ ತರುವಂತೆ ಪತ್ನಿಗೆ ನಿರಂತರ ಹಿಂಸೆಯನ್ನು ಕೂಡ ನೀಡಿದ್ದ ಎನ್ನಲಾಗಿದೆ. ಜೊತೆಗೆ ಮನೆಯಲ್ಲಿ ಆಗಾಗ ವಾಮಚಾರ ಮಾಡಿಸುತ್ತಾ, ನಿಧಿಗಾಗಿ ಶೋಧ ಮಾಡಿಸುತ್ತಿದ್ದ ಎಂದು ಹೇಳಲಾಗಿದೆ.
ಫೆ.11ರಂದು ಪತ್ನಿಗೆ ಹೈಡೋಸ್ ಇಂಜೆಕ್ಷನ್ ಚುಚ್ಚಿ ಈತ ಹತ್ಯೆ ಮಾಡಿದ್ದಾನೆ. ವಾಮಾಚಾರದ ಭಾಗವಾಗಿ, ಮಂತ್ರವಾದಿಗಳ ಸಲಹೆಯಂತೆ ಈತ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಎಫ್ ಎಸ್ ಎಲ್ ವರದಿಯಲ್ಲಿ ಶಿಲ್ವಾ ಅವರನ್ನು ಹತ್ಯೆ ಮಾಡಲಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಡಾ.ಚನ್ನೇಶಪ್ಪನನ್ನು ನ್ಯಾಮತಿ ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.