ತುಮಕೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಮೇ ಮತ್ತು ಜೂನ್ ಮಾಹೆಯ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ಮೇ–2026ರ ಮಾಹೆಯಲ್ಲಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಅಂತ್ಯೋದಯ ಪಡಿತರ ಚೀಟಿ(ಎಎವೈ) ಗೆ ಮಾಹೆಯಾನ 21 ಕೆ.ಜಿ.ಯಂತೆ 42 ಕೆ.ಜಿ. ರಾಗಿ; ಮಾಹೆಯಾನ 14 ಕೆ.ಜಿ.ಯಂತೆ 28 ಕೆ.ಜಿ. ಅಕ್ಕಿ ಸೇರಿದಂತೆ ಒಟ್ಟು 70 ಕೆ.ಜಿ. ರಾಗಿ ಹಾಗೂ ಅಕ್ಕಿಯನ್ನು ವಿತರಣೆ ಮಾಡಲಾಗುವುದು.
ಆದ್ಯತಾ(ಕೇಂದ್ರ) ಪಡಿತರ ಚೀಟಿ(ಪಿ.ಹೆಚ್.ಹೆಚ್.)ಯ ಪ್ರತಿ ಸದಸ್ಯರಿಗೆ ಮಾಹೆಯಾನ 3 ಕೆ.ಜಿ.ಯಂತೆ 6 ಕೆ.ಜಿ. ರಾಗಿ ಹಾಗೂ ಮಾಹೆಯಾನ 2 ಕೆ.ಜಿ.ಯಂತೆ 4 ಕೆ.ಜಿ. ಅಕ್ಕಿ ಸೇರಿದಂತೆ ಒಟ್ಟು 10 ಕೆ.ಜಿ. ರಾಗಿ ಹಾಗೂ ಅಕ್ಕಿಯನ್ನು ವಿತರಣೆ ಮಾಡಲಾಗುವುದು. ಆದ್ಯತಾ(ರಾಜ್ಯ) ಪಡಿತರ ಚೀಟಿ(ಪಿ.ಹೆಚ್.ಹೆಚ್.)ಯ ಪ್ರತಿ ಸದಸ್ಯರಿಗೆ ಮಾಹೆಯಾನ 5 ಕೆ.ಜಿ.ಯಂತೆ ಒಟ್ಟು 10 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುವುದು.
ಜಿಲ್ಲೆಯ ಪಡಿತರ ಚೀಟಿದಾರರು ಮೇ ಮತ್ತು ಜೂನ್ ಮಾಹೆಗೆ ಸಂಬಂಧಿಸಿದ 2 ತಿಂಗಳ ಪಡಿತರವನ್ನು ಮೇ–2026ರ ಮಾಹೆಯಲ್ಲಿಯೇ ಒಟ್ಟಿಗೆ ಪಡೆಯಬೇಕಾಗಿರುವುದರಿಂದ ಕಡ್ಡಾಯವಾಗಿ 2 ಬಾರಿ ಬಯೋಮೆಟ್ರಿಕ್ ನೀಡಿ ಪಡಿತರವನ್ನು ಪಡೆಯಬೇಕು. ಈ ಕಾರ್ಯಕ್ಕಾಗಿ ಪ್ರತಿ ದಿನ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಆಹಾರ ಇಲಾಖೆಯ ಸರ್ವರ್ ಲಭ್ಯಗೊಳಿಸಿರುವುದರಿಂದ ಪಡಿತರ ಚೀಟಿದಾರರು ಬಯೋ ನೀಡಿ, ಮೇ 31ರೊಳಗಾಗಿ ಪಡಿತರ ಪಡೆಯಬಹುದಾಗಿದೆ.
ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದು. ಕಾಳಸಂತೆಯಲ್ಲಿ ಅನಧಿಕೃತವಾಗಿ ಆಹಾರ ಧಾನ್ಯವನ್ನು ದಾಸ್ತಾನು/ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಕ್ರಮ ಜರುಗಿಸಲಾಗುವುದು. ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ ಕೇಂದ್ರ ಸಹಾಯವಾಣಿ ಸಂಖ್ಯೆ: 1967ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಅಥವಾ ಹತ್ತಿರದ ಆಹಾರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


