ವರದಿ: ಶಿವಕುಮಾರ್ ಮೇಷ್ಟ್ರುಮನೆ
ತುಮಕೂರು: ಮೂರು ವರ್ಷ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗ್ರಂಥಾಲಯದ ಮೇಲ್ವಿಚಾರಕನಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತುಮಕೂರು ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ(ಪೋಕ್ಸೋ) ನ್ಯಾಯಾಲಯವು ತೀರ್ಪು ನೀಡಿದೆ.
ಬಾಲಕಿಯು ಅಂಗನವಾಡಿ ಕೇಂದ್ರದಲ್ಲಿ ಓದುತ್ತಿದ್ದಳು. ದಿನಾಂಕ 29—07—2022ರಂದು ಅಂಗನವಾಡಿಗೆ ಕರೆದೊಯ್ಯಲು ಬಾಲಕಿಯ ತಾಯಿ ಮುಂದಾದಾಗ ನಾನು ಅಂಗನವಾಡಿಗೆ ಹೋಗುವುದಿಲ್ಲ ಎಂದು ಬಾಲಕಿ ಹಠ ಮಾಡಿದ್ದಾಳೆ. ಸಂಜೆ ಮನೆಗೆ ಹೋದಾಗ ಮೂತ್ರ ಮಾಡುವ ಜಾಗ ನೋವೆಂದು ಬಾಲಕಿ ತಾಯಿಗೆ ಹೇಳಿಕೊಂಡಿದ್ದಾಳೆ. ತಾಯಿ ಇದರ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ 28—07—2022ರಂದು ಅಂಗನವಾಡಿಯಲ್ಲಿ ಆಟವಾಡುತ್ತಿದ್ದಾಗ ಅಂಗನವಾಡಿಯ ಮುಂಭಾಗದಲ್ಲಿರುವ ಗ್ರಂಥಾಲಯದ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿರುವ ಸೋಮಶೇಖರ್ ಅಲಿಯಾಸ್ ಶೇಖರಣ್ಣ(45) ಎಂಬಾತ ಅಂಗನವಾಡಿ ಕೇಂದ್ರದ ಪಕ್ಕದಲ್ಲಿರುವ ಹೊಲ(ತೋಟ)ಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿರುವ ವಿಚಾರವನ್ನು ತಿಳಿಸಿದ್ದಾಳೆ.
ಈ ಪ್ರಕರಣ ಬಗ್ಗೆ ಘನ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳಾದ ನವೀನ್ ಕುಮಾರ್ ಅವರು ದೋಷಾರೋಪಣಾಪಟ್ಟಿ ಸಲ್ಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದಾಗ ಸೋಮಶೇಖರ್ ಅಲಿಯಾಸ್ ಶೇಖರಣ್ಣನ ವಿರುದ್ಧದ ಆರೋಪ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ತುಮಕೂರು ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ(ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶರು, ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದು, ದಂಡದ ಮೊತ್ತದಲ್ಲಿ 95 ಸಾವಿರ ರೂಪಾಯಿಗಳ ಪರಿಹಾರ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂಪಾಯಿಗಳ ಪರಿಹಾರ ಒಟ್ಟಾರೆಯಾಗಿ ನೊಂದ ಬಾಲಕಿಗೆ 4 ಲಕ್ಷದ 95 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ವಾದ ಮಂಡಿಸಿದರು.
ವಿಶೇಷ ಪ್ರಕರಣ:
ನೊಂದ ಬಾಲಕಿ 3 ವರ್ಷದ ಮಗುವಾಗಿರುವ ಕಾರಣ ಇದೊಂದು ವಿಶೇಷ ಪ್ರಕರಣವಾಗಿತ್ತು. ಬಾಲಕಿಗೆ ಬೆಂಬಲಿತ ವ್ಯಕ್ತಿಯಾಗಿ ಮನಃಶಾಸ್ತ್ರಜ್ಞರಾದ ಟವಿಕುಮಾರ್ ಅವರು ಸಾಕ್ಷ್ಯ ನೀಡಲು ಸಹಕರಿಸಿದರು.