ತುಮಕೂರು: ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುತ್ತಿರುವ 24ನೇ ರಾಷ್ಟ್ರೀಯ ಜೂನಿಯರ್ (20 ವರ್ಷದೊಳಗಿನ) ಅಥ್ಲೆಟಿಕ್ ಕ್ರೀಡಾಕೂಟಕ್ಕೆ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಶುಕ್ರವಾರ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ದೀಪ ಬೆಳಗುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಉದ್ಘಾಟನಾ ಭಾಷಣ ಮಾಡಿದ ಸಚಿವ ಪರಮೇಶ್ವರ ಅವರು, ತುಮಕೂರು ಶೀಘ್ರದಲ್ಲೇ ಅಂತರಾಷ್ಟ್ರೀಯ ಕ್ರೀಡಾ ಹಬ್ ಆಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು, ಹಾಕಿ ಮತ್ತು ಕಬಡ್ಡಿ ಅಂಕಣಗಳಿಗೂ ಜಾಗ ಗುರುತಿಸಲಾಗಿದೆ ಎಂದು ತಿಳಿಸಿದರು.
ಮುಂಬರುವ ಮೇ ತಿಂಗಳಲ್ಲಿ ಅಂತರಾಷ್ಟ್ರೀಯ ಮಹಿಳಾ ಟೆನಿಸ್ ಕ್ರೀಡಾಕೂಟ ನಡೆಯಲಿದ್ದು, ಸರ್ಕಾರವು ಕ್ರೀಡಾ ಅಭಿವೃದ್ಧಿಗಾಗಿ ₹3 ಕೋಟಿ ಅನುದಾನ ಮೀಸಲಿಟ್ಟಿದೆ ಎಂದು ಅವರು ತಿಳಿಸಿದರು.
ಈ ಕ್ರೀಡಾಕೂಟದ ವಿಶೇಷವೆಂದರೆ, ಇಲ್ಲಿ ಮೊದಲ ಎರಡು ಸ್ಥಾನ ಪಡೆಯುವ ಪ್ರತಿಭಾವಂತ ಅಥ್ಲೀಟ್ ಗಳು ಆಗಸ್ಟ್ ನಲ್ಲಿ ಅಮೆರಿಕದಲ್ಲಿ ನಡೆಯುವ ಅಂತರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲಿದ್ದಾರೆ. ಇದು ಯುವ ಕ್ರೀಡಾಪಟುಗಳಿಗೆ ಜಾಗತಿಕ ವೇದಿಕೆಯಲ್ಲಿ ಮಿಂಚಲು ಸಿಕ್ಕಿರುವ ದೊಡ್ಡ ಅವಕಾಶವಾಗಿದೆ ಎಂದರು.
- ಮೊದಲ ದಿನದ ಪದಕ ಬೇಟೆ: ಕ್ರೀಡಾಕೂಟದ ಮೊದಲ ದಿನವೇ ಅಥ್ಲೀಟ್ ಗಳು ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ನೀಡಿದರು. 100 ಮೀಟರ್ ಓಟ ಮತ್ತು ಪೋಲ್ ವಾಲ್ಟ್ ವಿಭಾಗಗಳಲ್ಲಿ ಹೊಸ ದಾಖಲೆಗಳು ನಿರ್ಮಾಣವಾದವು.
- ಪುರುಷರ 100 ಮೀಟರ್: 10.41 ಸೆಕೆಂಡ್‌ನಲ್ಲಿ ಗುರಿ ತಲುಪಿದ ಅಭಯ್ ಸಿಂಗ್ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಯುವರಾಜ್ ಸಿಂಗ್ ಬೆಳ್ಳಿ ಹಾಗೂ ಅನ್ಶು ರಾವತ್ ಕಂಚಿನ ಪದಕ ಪಡೆದರು.
- ಮಹಿಳೆಯರ 100 ಮೀಟರ್: ಉತ್ತರ ಪ್ರದೇಶದ ನಿಪಮ್ 11.53 ಸೆಕೆಂಡ್‌ನಲ್ಲಿ ಓಡಿ ಸ್ವರ್ಣ ಪದಕ ಗೆದ್ದರು. ತಮಿಳುನಾಡಿನ ಭವಾನಿ ಮತ್ತು ಗುಜರಾತಿನ ಇಜಾಲ್ ಶೇಕ್ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದರು.
- ಮಹಿಳೆಯರ ಪೋಲ್ ವಾಲ್ಟ್: ತಮಿಳುನಾಡಿನ ಬಿ. ಸಂದೀಯಾ ಅವರು 3.60 ಮೀಟರ್ ಜಿಗಿಯುವ ಮೂಲಕ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದು ಗಮನ ಸೆಳೆದರು.
ಶಾಸಕ ಬಿ. ಸುರೇಶ್ ಗೌಡ ಅವರು ಮಾತನಾಡಿ, ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯಗತ್ಯ ಎಂದು ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಒಟ್ಟಾರೆಯಾಗಿ ಮೊದಲ ದಿನದ ಆರು ವಿಭಾಗಗಳಲ್ಲಿ ಪದಕಗಳ ಹಂಚಿಕೆಯಾಗಿದ್ದು, ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


