ತುರುವೇಕೆರೆ: ನಮ್ಮ ಕ್ಷೇತ್ರಕ್ಕೆ ಮಂಜೂರಾಗಿದ್ದ ಸುಮಾರು 3,000 ಕ್ಕೂ ಹೆಚ್ಚು ಮನೆಗಳನ್ನು ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ತಮ್ಮ ಪ್ರಭಾವವನ್ನು ಬಳಸಿ ಕುಣಿಗಲ್ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ, ಎಂದು ತುರುವೇಕೆರೆ ಕ್ಷೇತ್ರದ ಶಾಸಕ ನೇರ ಆರೋಪ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಣಿಗಲ್ ಶಾಸಕರು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡು ತಮ್ಮ ಕ್ಷೇತ್ರದ ಜನತೆಗೆ ದ್ರೋಹವನ್ನು ಮಾಡಿದ್ದಾರೆ ಹಾಗೂ ಅವರ ಈ ಕೀಳು ಮಟ್ಟದ ನಡೆಯನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಧಿಕಾರಿಗಳ ಹಾಗೂ ಸರ್ಕಾರಿ ನೌಕರರ ವರ್ಗಾವಣೆಯನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದು ಅದರಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜುರವರು ನಮ್ಮ ಕ್ಷೇತ್ರದ ಅಧಿಕಾರಿಗಳ ವರ್ಗಾವಣೆಯ ದಂಧೆಯಲ್ಲಿ ಮುಳುಗಿದ್ದಾರೆ. ನನ್ನ ಕ್ಷೇತ್ರದ ಸಿ.ಎಸ್.ಪುರ ಪೊಲೀಸ್ ಠಾಣೆಯ ಪಿಎಸ್ ಐ ಇಬ್ಬರನ್ನು ಅವಧಿಗೂ ಮುನ್ನವೇ ವರ್ಗಾವಣೆ ಮಾಡಿಸಿ ಹಾಗೂ ತುರುವೇಕೆರೆ ಠಾಣೆಯ ಪೇದೆಗಳನ್ನು ಸಹ ಅವಧಿಗೂ ಮುನ್ನವೇ ವರ್ಗಾವಣೆಗೊಂಡು ಏಳರಿಂದ ಎಂಟು ತಿಂಗಳು ಸಹ ಕಳೆದಿಲ್ಲ ಅಂಥವರನ್ನ ದಿಡೀರ್ ವರ್ಗಾವಣೆ ಮಾಡಿಸಿ ನಮ್ಮ ತಾಳಕ್ಕೆ ಕುಣಿಯುವರನ್ನು ತಂದು ಕೂರಿಸಿಕೊಂಡಿದ್ದಾರೆ. ಎಲ್ಲಾ ದಿಢೀರ್ ವರ್ಗಾವಣೆಯಲ್ಲೂ ಬೆಮೆಲ್ ಕಾಂತರಾಜ್ ಕೈವಾಡ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ, ನಿಮ್ಮ ಕಚೇರಿಯ ಮುಂದೆ ಇರುವ ಜಾಗದಲ್ಲಿ ಯಾವ ಯಾವ ಅಧಿಕಾರಿಯ ವರ್ಗಾವಣೆಗೆ ಯಾವ ಯಾವ ದರ ನಿಗದಿ ಮಾಡಿದ್ದಾರೆ? ಉದಾಹರಣೆಗೆ ತಹಸೀಲ್ದಾರರಿಗೆ ಎಷ್ಟು ಹಣ ಎ ಇ ಇ ಗೆ ಇ ಓ ರವರಿಗೆ ಇಂತಿಷ್ಟು ಹಣ ಎಂದು ನಿಗದಿಪಡಿಸಿ ಫಲಕ ಹಾಕಿ ಜೊತೆಗೆ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ಫೋನ್ ನಂಬರ್ ಹಾಕಿದರೆ ವರ್ಗಾವಣೆ ಮಾಡಿಸಿಕೊಳ್ಳುವರಿಗೆ ನಿಮ್ಮ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಅದರಂತೆ ಮಾಜಿ ವಿಧಾನಪರಿಷತ್ ಸದಸ್ಯರಿಗೆ ವರ್ಗಾವಣೆ ದಂಧೆಯನ್ನು ಮಾಡಲು ಮಧ್ಯಸ್ಥಿಕೆ ಬೇಕಾಗಿರುವುದಿಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಹೆಡಗಿಹಳ್ಳಿ ವಿಶ್ವನಾಥ್, ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ದೇವರಾಜ್, ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಮಧು, ಸೋಪ್ನಹಳ್ಳಿ ಮಾಜಿ ಎಪಿಎಂಸಿ ಸದಸ್ಯ ವಿಜಯೇಂದ್ರ, ಗುತ್ತಿಗೆದಾರ ಸೋಮೇನಹಳ್ಳಿ ಶಿವಾನಂದ್ ಹಾಗೂ ದಲಿತ ಮುಖಂಡ ಮುನಿಯೂರು ರಂಗಸ್ವಾಮಿ ಸೇರಿದಂತೆ ಹಲವರು ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


