ಕೊರಟಗೆರೆ: ಕೊರಟಗೆರೆ ಪಟ್ಟಣದ ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಹಸಿಲ್ದಾರ್ ಮಂಜುನಾಥ್ ಕೆ. ಪೂಜೆ ಸಲ್ಲಿಸಿ ರೈತರಿಗೆ ಮೇವು ವಿತರಣೆಗೆ ಚಾಲನೆ ನೀಡಿದರು. ರಾಜ್ಯದಲ್ಲಿ ಭೀಕರ ಬರಗಾಲದಿಂದ ಮಳೆ ಬೆಳೆ ಇಲ್ಲದೆ ಜಾನುವಾರಗಳಿಗೆ ಮೇವು ಇಲ್ಲದೆ ಆಹಾಕಾರ ಸೃಷ್ಟಿ ಯಾಗಿರುವ ಕಾರಣ, ಈಗಾಗಲೇ ರಾಜ್ಯ ಸರ್ಕಾರವು ಕೊರಟಗೆರೆ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ.
ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಈಗಾಗಲೇ ತಾಲೂಕಿನ ಬುಕ್ಕಪಟ್ಟಣ ದೊಡ್ಡಮ್ಮ ದೇವಿ ಹಾಗೂ ಕ್ಯಾಮೇನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ, ಮೇವು ಬ್ಯಾಂಕ್ ಪ್ರಾರಂಭವಾಗಿದ್ದು, ಅಲ್ಲಿನ ಸುತ್ತಮುತ್ತ ಗ್ರಾಮಗಳ ರೈತರು ಜಾನುವಾರುಗಳಿಗೆ ಮೇವನ್ನು ಪಡೆದುಕೊಳ್ಳುತ್ತಿದ್ದಾರೆ.
ಇದೀಗ ಕೊರಟಗೆರೆ ಪಟ್ಟಣದ ಶ್ರೀ ಬೈಲಾಂಜನೇಯ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಮತ್ತೊಂದು ಮೇವು ಬ್ಯಾಂಕ್ ಇಂದಿನಿಂದ ಪ್ರಾರಂಭವಾಗಿದ್ದು, ಕಸಬಾ ಹೋಬಳಿಯ ರೈತರು ಹಾಗೂ ಸುತ್ತಮುತ್ತ ಹಳ್ಳಿಗಳ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈಗ ತಾನೇ ಎಲ್ಲಾ ಕಡೆ ವರುಣನ ಕೃಪೆ ನಮಗೆ ಆಗುತ್ತಿದೆ. ಉತ್ತಮ ಮಳೆಯಾಗಿ ಜಾನುವಾರಗಳಿಗೆ ನೀವು ಸಿಗುವಂತಾಗಲಿ. ಹಾಗೆಯೇ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿ. ತಾಲೂಕಿನಲ್ಲಿ ಈಗ 3 ಮೇವು ಬ್ಯಾಂಕುಗಳು ಪ್ರಾರಂಭವಾಗಿದ್ದು, ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಜಾನುವಾರುಗಳಿಗೆ ಮೇವು ಸಿಗುತ್ತದೆ ಎಂದು ತಾಲೂಕು ದಂಡಾಧಿಕಾರಿ ಮಂಜುನಾಥ್ ಕೆ. ತಿಳಿಸಿದರು.
ತಾಲೂಕು ಪಶು ಇಲಾಖೆ ಅಧಿಕಾರಿ ನಾಗಭೂಷಣ್ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಬರಗಾಲ ಪಿಡಿತ ಪ್ರದೇಶವಾದ ನಮ್ಮ ಕೊರಟಗೆರೆ ತಾಲೂಕಿನ ಜಾನುವಾರಗಳನ್ನು ಹೊಂದಿರುವ ಪ್ರತಿಯೊಬ್ಬ ರೈತರಿಗೂ, ಮೇವಿನ ಸಮಸ್ಯೆ ಉಂಟಾಗಿದ್ದು, ಈಗಾಗಲೇ ತಾಲೂಕಿನ 3 ಭಾಗಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಒಂದು ವಾರಕ್ಕೆ ಆಗುವಷ್ಟು ಮೇವನ್ನು ಒಂದೇ ಬಾರಿ ರೈತರು ತೆಗೆದುಕೊಂಡು ಹೋಗಬಹುದು. ಪ್ರತಿಯೊಬ್ಬ ರೈತರು ಪಶು ಆಸ್ಪತ್ರೆಯಲ್ಲಿ ಮೇವು ವಿತರಣೆಯ ಕಾರ್ಡನ್ನು ಪಡೆದು ಮೇವು ವಿತರಿಸುವ ಸ್ಥಳದಲ್ಲಿ ಪ್ರತಿ ಕೆಜಿಗೆ 2 ರೂ. ನಂತೆ ಹಣವನ್ನು ಪಾವತಿಸಿ ಒಂದು ಜಾನುವಾರಿಗೆ 6 ಕೆಜಿವರೆಗೆ ಮೇವನ್ನ ಪಡೆಯಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೊರಟಗೆರೆ ಪಶು ಆಸ್ಪತ್ರೆಯ ವೈದ್ಯರು, ಕಂದಾಯ ಇಲಾಖೆಯ ಅಧಿಕಾರಿಗಳು, ಕೊರಟಗೆರೆ ಕಸಬಾ ಗ್ರಾಮಗಳ ರೈತರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296