ಒಂದು ವೇಳೆ ನಾಲ್ಕನೇ ಕೋವಿಡ್ ಅಲೆ ಬಂದರೂ ಜನತೆ ಭಯಬೀಳಬೇಕಾದ ಅಗತ್ಯವಿಲ್ಲ. ಸರ್ಕಾರ ಇದನ್ನು ನಿಯಂತ್ರಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಒಂದು ಮತ್ತು ಎರಡನೆ ಅಲೆ ನಮಗೆ ಸಾಕಷ್ಟು ಪಾಠ ಕಲಿಸಿದೆ.ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಪರಿಣಾಮ ಮೂರನೆ ಅಲೆಯಲ್ಲಿ ಯಾವುದೇ ರೀತಿಯ ಹೆಚ್ಚಿನ ದುಷ್ಪರಿಣಾಮ ಬೀರಲಿಲ್ಲ ಎಂದು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಒಂದು ತಿಂಗಳು ಮುಂಚಿತವಾಗಿಯೇ ಕೋವಿಡ್ ನಾಲ್ಕನೆ ಅಲೆ ಬರಬಹುದೆಂದು ತಜ್ಞರು ವರದಿ ನೀಡಿದ್ದಾರೆ.
ಹೀಗಾಗಿ ನಾವು ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಜನರು ವದಂತಿಗಳಿಗೆ ಕಿವಿಕೊಡದೆ ಮೊದಲು ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು.ಐಐಟಿ ಕಾನುರ್ ಅವರನ್ನೊಳಗೊಂಡ ತಜ್ಞರ ತಂಡ ಜೂನ್ ತಿಂಗಳ ಅಂತ್ಯಕ್ಕೆ ನಾಲ್ಕನೆ ಕೋವಿಡ್ ಅಲೆ ಬರಬಹುದೆಂದು ಹೇಳಿದ್ದರು. ಆದರೆ, ಇದೀಗ ಒಂದು ತಿಂಗಳು ಮುಂಚಿತವಾಗಿಯೇ ಬರಬಹುದೆಂದು ವರದಿ ಕೊಟ್ಟಿದ್ದಾರೆ. ಒಂದು, ಎರಡು ಮತ್ತು ಮೂರನೆ ಅಲೆಯಲ್ಲಿ ಅವರು ನೀಡಿರುವ ವೈಜ್ಞಾನಿಕ ವರದಿಗಳು ಸರಿಸುಮಾರು ಬಹುತೇಕ ಸರಿಯಾಗಿದೆ ಎಂದರು.
ಲಸಿಕೆ ಇಲ್ಲದಿದ್ದಾಗ ಪರದಾಡುವ ಬದಲು ನಮ್ಮಲ್ಲಿ ಸಾಕಷ್ಟು ಲಸಿಕೆ ಸಂಗ್ರಹವಿದೆ. ಯಾರು ಎರಡನೇ ಮತ್ತು ಮೂರನೆ ಲಸಿಕೆಯನ್ನು ಪಡೆದಿಲ್ಲವೇ ಅಂತಹವರು ತಕ್ಷಣ ಪಡೆಯಬೇಕು. ನೀವು ಲಸಿಕೆ ಪಡೆದರೆ ಸೋಂಕು ಬರುವುದಿಲ್ಲ ಎಂದು ಭಾವಿಸಬೇಡಿ. ಆದರೆ, ಆಗಬಹುದಾದ ಅನಾಹುತವನ್ನು ತಡೆಯಲು ಸಾಧ್ಯವಾಗತ್ತದೆ ಎಂದು ಸುಧಾಕರ್ ಸಲಹೆ ಮಾಡಿದರು.
ಅರವತ್ತು ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆಯನ್ನು ನೀಡುತ್ತಿದ್ದೇವೆ. ಲಸಿಕೆ ಪಡೆಯದೇ ಇರುವವರು ಕೂಡಲೇ ತೆಗೆದುಕೊಳ್ಳಬೇಕು. ಎರಡನೇ ಲಸಿಕೆಯನ್ನು 12ರಿಂದ 15 ಲಕ್ಷ ಮಂದಿ ಪಡೆದಿಲ್ಲ. ಉಚಿತವಾಗಿ ಕೊಟ್ಟರೂ ಲಸಿಕೆ ಹಾಕಿಸಿಕೊಳ್ಳಲು ಸಮಸ್ಯೆಯಾದರೂ ಏನು ಎಂದು ಪ್ರಶ್ನಿಸಿದರು.
ನಾಲ್ಕನೆ ಅಲೆ ಬರುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಚಿಂತೆ ಬೇಡ. ಇದು ಹೊಸ ಪ್ರಭೇದವೋ ಇಲ್ಲವೆ ಮುಂದುವರೆದ ಭಾಗವೋ ಎಂಬುದು ಅಧ್ಯಯನದಿಂದ ಗೊತ್ತಾಗುತ್ತದೆ. ನಾಲ್ಕನೆ ಅಲೆ ಬಂದರೂ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಲಸಿಕೆ ಪಡೆದ ಪರಿಣಾಮ ಮೂರನೆ ಅಲೆಯಲ್ಲಿ ಐಸಿಯು, ಆಸ್ಪತ್ರೆಗೆ ದಾಖಲಾಗುವುದು, ಔಷಗಳ ಸಮಸ್ಯೆ ಎದುರಾಗಲಿಲ್ಲ.
ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ನಾವು ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಜಾರಿ ಮಾಡಿದ್ದೇವೆ. ನೀವು ಸಹ ನಮ್ಮ ಜತೆ ಕೈಜೋಡಿಸಿ ಎಂದು ಮನವಿ ಮಾಡಿದರು.
ನಾಳೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಆಯಾ ರಾಜ್ಯಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗಿಲ್ಲ. ಹಾಗಾಗಿ ಜನತೆ ಭಯಭೀತರಾಗುವುದು ಬೇಡ ಎಂದು ಡಾ.ಸುಧಾಕರ್ ಅಭಯ ನೀಡಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5