ಲೋಕಸಭಾ ಚುನಾವಣೆಯ ಟಿಕೆಟ್ ವಿಚಾರವಾಗಿ ರಾಜ್ಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಭಾರೀ ಹೈಡ್ರಾಮಗಳು ನಡೆಯುತ್ತಿವೆ. ಅಂತೆಯೇ ಇದೀಗ ಕೋಲಾರ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಸಿಡಿದೆದ್ದಿರುವ ಕೋಲಾರ ಜಿಲ್ಲೆಯ ಐವರು ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ.
ಹೌದು, ಕೋಲಾರ ಲೋಕಸಭಾ ಕ್ಷೇತ್ರದಿಂದ ಸಚಿವ ಮುನಿಯಪ್ಪ ಅಳಿಯ ಕೆ.ಜಿ. ಚಿಕ್ಕಪೆದ್ದಣ್ಣರನ್ನು ಕಣಕ್ಕಿಳಿಸುವ ವಿಚಾರ ಇದೀಗ ಸ್ಥಳೀಯ ಶಾಸಕರ ಹಾಗೂ ವಿಧಾನ ಪರಿಷತ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದ್ದು ಎಲ್ಲರೂ ರಾಜಿನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಚುನಾವಣೆ ಹೊತ್ತಲ್ಲೇ ಕೈ ಪಡೆಗೆ ತಮ್ಮ ಶಾಸಕರೇ ದೊಡ್ಡ ಆಘಾತ ಎದುರಾಗಿದೆ.
ಅಂದಹಾಗೆ,ಕೋಲಾರ ಟಿಕೆಟ್ ವಿಚಾರ ಇದೀಗ ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ತಾರಕಕ್ಕೇರಿದ್ದು ಸಚಿವ ಎಂ ಸಿ ಸುಧಾಕರ್, ಶಾಸಕರಾದ ಕೊತ್ತೂರು ಮಂಜುನಾಥ್, ಕೆ.ವೈ.ನಂಜೇಗೌಡ, ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ನಜೀರ್ ಅಹಮದ್ ತೀವ್ರವಾಗಿ ವಿರೋಧಿಸಿದ್ದಾರೆ. ಇಷ್ಟೇ ಅಲ್ಲದೆ ಇದೀಗ ಕೆಲವರು ಸ್ಪೀಕರ್ ಗೆ ರಾಜಿನಾಮೆ ಪತ್ರವನ್ನೂ ನೀಡಿದ್ದಾರೆ ಎಂಬ ಸುದ್ದಿ ಬಂದಿದೆ.
ಈ ಬಗ್ಗೆ ನಜೀರ್ ಅಹಮದ್ ಮಾತನಾಡಿ ನಾನು ಸಚಿವನಾಗಿದ್ದಾಗ ಮುನಿಯಪ್ಪ ಬ್ಯಾಗ್ ಹಿಡಿದುಕೊಂಡು ಬರುತ್ತಿದ್ದ. ಕೆಎಚ್ ಮುನಿಯಪ್ಪ ಒಬ್ಬ ಪುಟಗೋಸಿ. ಮುನಿಯಪ್ಪ ಪುಟಗೋಸಿ ಬ್ಯಾಗ್ ಹಿಡಿದುಕೊಂಡು ನನ್ ಹಿಂದೆ ಬರುತ್ತಿದ್ದ. ಆಗಲೇ ನಾನು ಸಚಿವನಾಗಿದ್ದೆ ಎಂದ ಅಹ್ಮದ್, ಕ್ಷೇತ್ರದಲ್ಲಿ ಗೆಲ್ಲುವಂತಹ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂದು ಆಗ್ರಹಿಸಿದರು.
ಇನ್ನು ಶಾಸಕರ ಕೋಪವನ್ನು ಶಮನ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಿಂದಲೇ ಫೋನಿನ ಮೂಲಕ ಮಾತನಾಡಿದ್ದು ಏನೂ ಪ್ರಯೋಜನ ಆಗಿಲ್ಲ. ಸಚಿವ ಮುನಿಯಪ್ಪ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳಿದ್ದಾರೆ. ಅಲ್ಲದೆ ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದವರನ್ನು ಕಾಂಗ್ರೆಸ್‍ಗೆ ಸೇರಿಸಿಕೊಂಡರು, ವಿಧಾನಸಭೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿಕೊಂಡರು, ಸಚಿವರನ್ನಾಗಿ ಮಾಡಿದರೂ ಆಗಲೂ ನಾನು ವಿರೋಧ ಮಾಡಲಿಲ್ಲ. ಈಗ ಉದ್ದೇಶ ಪೂರ್ವಕವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಅವರಿಗೆ ಕ್ಷೇತ್ರದ ಭಿನ್ನಮತ ಸ್ಫೋಟ ವಿಷಯ ತಲುಪಿದ್ದು ಸದ್ಯಕ್ಕೆ ಕೋಲಾರ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಿಸದೆ ತಡೆಹಿಡಿಯಲು ನಿರ್ಧರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296