ತುಮಕೂರು: ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡವನ್ನು ವಿಧಿಸಿ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ(POCSO) ನ್ಯಾಯಾಲಯವು ತೀರ್ಪು ನೀಡಿದೆ.
2023 ಸೆಪ್ಟಂಬರ್ 27ರಂದು ಈ ಘಟನೆ ನಡೆದಿತ್ತು. ಅನಾರೋಗ್ಯದ ಹಿನ್ನೆಲೆ ನೊಂದ ಬಾಲಕಿ ತನ್ನ ತಾಯಿ ನಡೆಸುತ್ತಿದ್ದ ಪೆಟ್ಟಿಗೆ ಅಂಗಡಿ ಮುಂಭಾಗದಲ್ಲಿ ಮಲಗಿದ್ದಳು. ಈ ಸಂದರ್ಭದಲ್ಲಿ ಅಂಗಡಿಗೆ ಬಂದ 41 ವರ್ಷದ ಮಲ್ಲೇಶ ಎಂಬಾತ ಬೀಡಿ ಕೊಡುವಂತೆ ಕೇಳಿದ್ದಾನೆ. ಬೀಡಿ ಕೊಡಲು ಬಾಲಕಿ ಅಂಗಡಿ ಒಳಗೆ ಹೋದ ಸಂದರ್ಭದಲ್ಲಿ ಮಲ್ಲೇಶ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಘಟನೆ ವೇಳೆ ಬಾಲಕಿಯ ತಾಯಿ ತನ್ನ ಅತ್ತಿಗೆ ಮನೆಯಲ್ಲಿದ್ದರು. ಬಾಲಕಿಯ ಕಿರುಚಾಟ ಕೇಳಿ, ತಾಯಿ, ದೊಡ್ಡಮ್ಮ ಓಡಿ ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ. ಬಳಿಕ 112ಗೆ ಕರೆ ಮಾಡಿ ಮಲ್ಲೇಶನನ್ನು ಪೊಲೀಸ್ ವಶಕ್ಕೆ ನೀಡಿದ್ದರು.
ಈ ಪ್ರಕರಣ ಸಂಬಂಧ ತನಿಖಾಧಿಕಾರಿ ನಾಗರಾಜು ಜೆ.ಆರ್. ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದರು. ಅಭಿಯೋಜನೆ ಪರ ವಿಚಾರಣೆ ಮಾಡಲಾದ ಸಾಕ್ಷಿಗಳಿಂದ ಮಲ್ಲೇಶನ ವಿರುದ್ಧ ಮಾಡಲಾಗಿದ್ದ ಆರೋಪ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅಪರಾಧಿ ಮಲ್ಲೇಶನಿಗೆ 5 ವರ್ಷಗಳ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡವನ್ನು ವಿಧಿಸಿ ತೀರ್ಪು ನೀಡಿದರು. ಅಲ್ಲದೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೊಂದ ಬಾಲಕಿಗೆ 50 ಸಾವಿರ ರೂಪಾಯಿಗಳ ಪರಿಹಾರ ಸೇರಿದಂತೆ ಒಟ್ಟು 95,000 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶ ನೀಡಿದರು.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ವಾದ ಮಂಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q