ತುಮಕೂರು: ನಾಡಿನಾದ್ಯಂತ ಹುಣಸೆ ಹಣ್ಣಿನ ಬೆಲೆಯು ಕುಸಿದಿರುವುದರಿಂದ ರೈತರಿಗೆ ನೆರವಾಗಲು ಹುಣಸೆಹಣ್ಣಿಗೂ ಬೆಂಬಲ ಬೆಲೆ ಘೋಷಿಸಬೇಕು ಮತ್ತು ಹುಣಸೆಹಣ್ಣಿನ ಖರೀಧಿ ಕೇಂದ್ರಗಳನ್ನು ತೆರೆಯಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಎಪಿಎಂಸಿಯ ಹುಣಸೆಹಣ್ಣಿನ ಮಂಡಿಯಲ್ಲಿ ಸೋಮವಾರ ರೈತರು ಮತ್ತು ಮಂಡಿ ವರ್ತಕರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಹುಣಸೆ ಬೆಳೆಯುವ ಪ್ರದೇಶವಾದ ಜಿಲ್ಲೆಯ ರೈತರ ಪಾಲಿಗೆ ಯುಗಾದಿ ಶುಭ ಸೂಚನೆ ಕೊಟ್ಟಿಲ್ಲ. ಎಪಿಎಂಸಿಯಲ್ಲಿ ಹುಣಸೆಹಣ್ಣಿನ ಬೆಲೆ ತೀವ್ರವಾಗಿ ಕುಸಿದಿದೆ. ಬೆಲೆ ಕುಸಿದ ರೀತಿ ಕಂಡ ರೈತರು ಅಕ್ಷರಶಃ ತತ್ತರಿಸಿದ್ದಾರೆ ಎಂದರು.
ಜಿಲ್ಲೆಯ ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗ್ರಾಮಾಂತರ ಸೇರಿದಂತೆ ಪಕ್ಕದ ಚಿತ್ರದುರ್ಗ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ ಹೀಗೆ ಬಯಲು ಸೀಮೆಯ ಕಲ್ಪವೃಕ್ಷ ಕಾಮದೇನು ಹುಣಸೆ. ಇದೊಂದು ಬಂಗಾರದ ಬೆಳೆ. ಬೀಜ, ಹಿಪ್ಪೆ, ನಾರು, ತೊಗಟೆ ಸಂಪೂರ್ಣ ಬಳಕೆಗೆ ಉಪಯೋಗಿಸಲ್ಪಡುವ ಹುಣಸೆ ಜನೋಪಯೋಗಿರುವ ಫಸಲು, ಒಂದು ಮರಕ್ಕೆ 1,500 ರಿಂದ 3,000 ರೂ. ಇದ್ದ ಬೆಲೆ ಈಗ 500 ರಿಂದ 800 ರೂಪಾಯಿಗೆ ಖೇಣಿದಾರರು ಕೇಳುತ್ತಿದ್ದಾರೆ. ಹಿಂದೆ ಕ್ವಿಂಟಾಲ್ ಗೆ 28,000ದಿಂದ 30,000 ರೂ. ಇದ್ದ ಬೆಲೆ, ಈಗ ಕೇವಲ 9,000 ಸಾವಿರದಿಂದ 20,000 ರೂ.ಗೆ ಕುಸಿದು ಆತಂಕ ಸೃಷ್ಠಿಸಿದೆ ಎಂದರು.
ಆದ್ದರಿಂದ ಸರ್ಕಾರ ತಕ್ಷಣ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ಹಾಗೂ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಇದರ ಜೊತೆಗೆ ಕೋಲ್ಡ್ ಸ್ಟೋರೇಜ್ ಅತ್ಯವಶ್ಯಕವಾಗಿ ಬೇಕಾಗಿದೆ. ಅಡಕೆ, ತೆಂಗು ಸೇರಿದಂತೆ ನೂರಾರು ಬೆಳೆಗಳಿಗೆ “ಪರಿಹಾರ, ಅನುದಾನ, ಸಾಲಸೌಲಭ್ಯ” ಗಳನ್ನು ಸರ್ಕಾರ ನೀಡಿದಂತೆ ಹುಣಸೆ ಬೆಳೆಗೂ ಸಹ ಅನುದಾನ, ಪರಿಹಾರ, ಸಾಲ-ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ಹುಣಸೆ ಬೆಳೆ ರೈತರ ಜೀವನಾಡಿಯಾಗಿದೆ. ಇದು ಮಳೆಯಾಶ್ರಿತ ರೈತರ ಬೆಳೆಯಾಗಿದ್ದು, ವೈಜ್ಞಾನಿಕ ಸಮೀಕ್ಷೆ ನಡೆಸಿ ಮೌಲ್ಯವನ್ನು ಹೆಚ್ಚಿಸಬೇಕು ಹಾಗೂ ಉಪ ಉತ್ಪನ್ನಗಳ ಕುರಿತು ಅರಿವು ಮೂಡಿಸಬೇಕು. ಪ್ರತಿದಿನ ಹುಣಸೆ ಮರಗಳಲ್ಲಿ ಹಣ್ಣನ್ನು ಉದುರಿಸಿ, ಕುಟ್ಟಿ, ನಾರು ತೆಗೆಯಲು ಕೂಲಿ, ಹುಣಸೆಹಣ್ಣು ಆರಿಸುವ, ಅದನ್ನು ತಂದು ಬೀಜ ಬೇರ್ಪಡಿಸುವ, ನಾರು ತೆಗೆಯುವ ಖರ್ಚು, ಮಾರುಕಟ್ಟೆಗೆ ಸಾಗಿಸಲು ವೆಚ್ಚ, ಯಾರ್ಡ್ಗಳಲ್ಲಿ ಜಾಗದ ಬಾಡಿಗೆ, ಇತ್ಯಾದಿ ಖರ್ಚುಗಳು ಹೇಳತೀರದಾಗಿದೆ. ಹೀಗಾಗಿ ಕೊಳ್ಳುವ ವರ್ತಕರಿಗೆ ಮತ್ತು ಬೆಳೆದ ರೈತರಿಗೆ ಕನಿಷ್ಟ ಬೆಲೆ ಸಿಗುವಂತಾಗಬೇಕು, ಮರಗಳಲ್ಲಿ ಕೊಳೆತರು, ವ್ಯಾಪಾರಿ ನೋಡುತ್ತಿಲ್ಲ, ಬೆಲೆ ಕುಸಿತದಿಂದಾಗಿ ರೈತರಿಗೂ ಮತ್ತು ವರ್ತಕರಿಗೂ ನಷ್ಟ. ಸರ್ಕಾರದ ವತಿಯಿಂದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕೆAದು ಮುರಳೀಧರ ಹಾಲಪ್ಪ ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, 2018 ರಲ್ಲಿ ಹುಣಸೆಗೆ ಕ್ವಿಂಟಲ್ ಬೆಲೆ ಗರಿಷ್ಠ 25 ಸಾವಿರಕ್ಕೆ ಮಾರಾಟವಾಗಿತ್ತು 2019ರಲ್ಲಿ 16 ಸಾವಿರಕ್ಕೆ ಇಳಿದಿತ್ತು, ಆದರೆ 2020ರಲ್ಲಿ 35 ಸಾವಿರಕ್ಕೆ ಏರಿಕೆ ಕಂಡು ದಾಖಲೆಯ ಬರೆದಿತ್ತು. ಆದರೆ ಈಗ 9 ಸಾವಿರದಿಂದ 20 ಸಾವಿರಕ್ಕೆ ಇಳಿದಿರುವುದು ಆತಂಕ ಸೃಷ್ಠಿಸಿದೆ ಎಂದರು.
ನವ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್ ಮಾತನಾಡಿ, ನಾವು ಅಂದುಕೊಂಡಿದ್ದ ಬೆಲೆಗೂ ಮಾರುಕಟ್ಟೆ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಈ ಮೊತ್ತಕ್ಕೆ ಮಾರಿದರೆ ನಮಗೆ ಏನೂ ಗಿಟ್ಟುವುದಿಲ್ಲ, ಸರ್ಕಾರ ಹುಣಸೆಗೆ ಬೆಂಬಲ ಬೆಲೆ ಘೋಷಿಸುವುದರ ಜೊತೆಗೆ ಖರೀದಿ ಕೇಂದ್ರಗಳನ್ನು ತೆರೆದು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸಹಾಯಕ ಕಾರ್ಯದರ್ಶಿಗಳಾದ ಹೊನ್ನೂರು ಸ್ವಾಮಿ ಮತ್ತು ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಎಪಿಎಂಸಿ ಮಾಜಿ ಸದಸ್ಯ ಯದು, ಮುಖಂಡರಾದ ಟಿ.ಎಸ್.ನಿರಂಜನ್, ಮರಿಚೆನ್ನಮ್ಮ, ವಸಂತಮ್ಮ, ಗೀತಾ, ನಟರಾಜು, ಮಂಜುನಾಥ್, ಪ್ರಕಾಶ್, ಕೃಷ್ಣಮೂರ್ತಿ, ರಿಜ್ವಾನ್ ಪಾಷ, ಸಿ.ಡಿ.ರಾಜಪ್ಪ, ಸಂಜೀವ್, ಎಸ್. ಮಲ್ಲಿಕಾರ್ಜುನ್, ಡಿ.ಸಿ ಕೃಷ್ಣಮೂರ್ತಿ, ಗಿರಿಯಪ್ಪ ಆರ್.ಎಸ್, ಬಸವರಾಜು, ಸಿ.ಕೆ ಮಧು, ಕೆ.ದರ್ಶನ್, ಎಸ್. ದೊಡ್ಡಯ್ಯ, ರಾಮಣ್ಣ, ಬಿ.ತಿಮ್ಮಯ್ಯ, ರಂಗಣ್ಣ, ರಾಮಣ್ಣ, ಸೋಮಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ: ಮಾರುತಿ ಪ್ರಸಾದ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5