ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ಉಡುಪಿ-ಮಂಗಳೂರು ಪ್ರವಾಸಕ್ಕೆ ತೆರಳುವ ಮುನ್ನ ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಇಂದು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ಗೆ ಪ್ರತಿಭಟನೆ ಮಾಡೋಕೆ ನೈತಿಕ ಹಕ್ಕೇ ಇಲ್ಲ ಎಂದರು.
ಈ ದೇಶದಲ್ಲಿ ಅತಿ ಹೆಚ್ಚು ಬೆಲೆ ಏರಿಕೆ ಮಾಡಿದ ಕೀರ್ತಿ, ಖ್ಯಾತಿ, ದಾಖಲೆ ಕಾಂಗ್ರೆಸ್ ಪಕ್ಷದ್ದು ಎಂದು ವಾಗ್ದಾಳಿ ನಡೆಸಿದ ಅವರು, ಯಾವ ನೈತಿಕತೆ ಇಟ್ಟುಕೊಂಡು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯೋ ಗೊತ್ತಿಲ್ಲ ಎಂದರು. ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಬೆಲೆಗಳು ಇಳಿಕೆಯಾಗಿರಲಿಲ್ಲ. ಈಗಿರುವಾಗ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುವುದಕ್ಕೆ ನೈತಿಕತೆ ಇಲ್ಲ ಎಂದರು.
ಮಂಡ್ಯದ ವಿದ್ಯಾರ್ಥಿನಿ ಮಸ್ಕಾನ್‌ಗೂ ಆಲ್ ಖೈದಾಗೂ ಸಂಬಂಧ ಇದೆ ಈ ಬಗ್ಗೆ ತನಿಖೆ ನಡೆಸಿ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಪತ್ರ ಬರೆದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ನಾನು ಅನಂತ್ ಕುಮಾರ್ ಹೆಗಡೆ ಜತೆ ಚರ್ಚೆ ಮಾಡುತ್ತೇನೆ. ಅವರ ಬಳಿ ಏನು ಮಾಹಿತಿ ಇದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಅವರು ನೀಡುವ ಮಾಹಿತಿ ಆಧಾರದ ಮೇಲೆ ಮುಂದೆ ಏನು ಮಾಡಬೇಕು ಎಂಬ ತೀರ್ಮಾನ ಮಾಡುತ್ತೇನೆ ಎಂದರು.
ಸಂಸದೆ ಸುಮಲತಾ ಅಂಬರೀಷ್ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳಿಗೂ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಇಲ್ಲ ಇದು ನಿರಾಧಾರ. ಸುಮಲತಾ ಅಂಬರೀಷ್ ಅವರು ತಮ್ಮ ತಂಗಿಯ ಮಗಳ ವಿವಾಹಕ್ಕೆ ಆಹ್ವಾನ ನೀಡಲು ಇಂದು ಬೆಳಗ್ಗೆ ತಮ್ಮನ್ನು ಭೇಟಿಯಾಗಿದ್ದರು. ಅಷ್ಟೇ ಬೇರೆನೂ ಇಲ್ಲ ಎಂದರು. ಮುಖ್ಯ ನ್ಯಾಯಮೂರ್ತಿಯವರಿಂದ ತನಿಖೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಈ ಸಮಿತಿ ಈ ಅಕ್ರಮದ ಬಗ್ಗೆ ಪರಾಮರ್ಶಿಸಿ ತನಿಖಾ ವರದಿಯನ್ನು ನೀಡಲಿದೆ. ಈ ವರದಿ ಬಂದ ನಂತರ ಮುಂದಿನ ತೀರ್ಮಾನಗಳನ್ನು ಕೈಗೊಳ್ಳುವುದಾಗಿ ಅವರು ಹೇಳಿದರು.
ಇಂದು ಉಡುಪಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುತ್ತಿದ್ದೇನೆ. ನಾಳೆ ಮಂಗಳೂರಿನಲ್ಲಿ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಸರಣಿ ಸಭೆಗಳಿವೆ. ಇಡೀ ದಿನದ ಸಭೆಯಲ್ಲಿ ಪಾಲ್ಗೊಂಡು ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ಸಾಗುವುದಾಗಿ ಮುಖ್ಯಮಂತ್ರಿಗಳು ಹೇಳಿದರು.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


