ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರ ತಲೆದಂಡ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಶೇ.40ರಷ್ಟು ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಸಂತೋಷ್ ಪಾಟೀಲ್ ಪ್ರಕರಣವು ಕಾಂಗ್ರೆಸ್‍ಗೆ ಪ್ರಭಲ ಅಸ್ತ್ರ ಸಿಕ್ಕಂತಾಗಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲಿಯೇ ಪ್ರತಿಪಕ್ಷ ಕಾಂಗ್ರೆಸ್ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಕೂಡಲೇ ಈಶ್ವರಪ್ಪ ರಾಜೀನಾಮೆಯನ್ನು ಪಡೆಯಬೇಕು ಮತ್ತು ಅವರನ್ನು ಸಂಪುಟದಿಂದ ಕಿತ್ತೆಸೆಯಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಈಶ್ವರಪ್ಪನವರ ರಾಜೀನಾಮೆಗೆ ಪ್ರತಿಪಕ್ಷಗಳಿಂದ ಒತ್ತಡ ಹಿನ್ನೆಲೆ ಸಿಎಂ ಬೊಮ್ಮಾಯಿಯವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಸದ್ಯ ಬೆಳಗಾವಿ ಪ್ರವಾಸದಲ್ಲಿರುವ ಯಡಿಯೂರಪ್ಪನವರ ಜೊತೆಗೆ ಸಿಎಂ ಬೊಮ್ಮಾಯಿ ಮಾತನಾಡಿದ್ದು, ಈಶ್ವರಪ್ಪನವರಿಂದ ರಾಜೀನಾಮೆ ಪಡೆಯುವ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದುಬಂದಿದೆ.
ಉಭಯ ನಾಯಕರ ಫೋನ್ ಸಂಭಾಷಣೆ ಕುರಿತು ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಸಿಎಂ ಬೊಮ್ಮಾಯಿಯವರ ಮಾತಿಗೆ ಬಿಎಸ್‌ವೈ ಸಮ್ಮತಿ ನೀಡಿದ್ರಾ? ಸಚಿವ ಸ್ಥಾನಕ್ಕೆ ಇಂದು ರಾತ್ರಿಯೇ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡುತ್ತಾರಾ? ಅನ್ನೋ ಪ್ರಶ್ನೆಗಳು ಮೂಡಿವೆ.
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಮಂಗಳವಾರ ಉಡುಪಿಯ ಖಾಸಗಿ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪನವರೇ ಕಾರಣವೆಂದು ಡೇತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದಾನೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದ ಸಂತೋಷ್, ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದರು. ಪ್ರಕರಣ ಸಂಬಂಧಿಸಿದಂತೆ ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪಟ್ಟು ಹಿಡಿದಿವೆ.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


