ಸರಗೂರು: ತಾಲ್ಲೂಕಿನ ಕಂದಲಿಕೆ ಹೋಬಳಿಯ ಬೆದ್ದಲಪುರ ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಚಲುವರಾಜು, ಸಭೆಯಲ್ಲಿ ತಿಳಿಸಲಾದ ಸಾಕಷ್ಟು ಸಮಸ್ಯೆಗಳನ್ನು ಸ್ಥಳದಲ್ಲೆ ಬಗೆಹರಿಸಲಾಗುವುದು ಉಳಿದಂತೆ ದುರಸ್ಥಿ, ಒತ್ತುವರಿ ತೆರವು, ಓಣಿ ಬಿಡುಸುವ ಸಮಸ್ಯೆಗಳ ಬಗ್ಗೆ ವಿವಿಧ ಇಲಾಖೆಗಳಿಗೆ ಸೂಚಿಸಿ ಅವರ ಸಹಕಾರದಿಂದ ಆದಷ್ಟು ಬೇಗ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಸರಗೂರು ವ್ಯಾಪ್ತಿಯ 3 ಭಾಗಗಳಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ನಡೆಸಿ ಆ ಭಾಗಗಳ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುತಿದೆ. ಇದು ನಾಲ್ಕನೇ ಕಾರ್ಯಕ್ರಮ ಇಲ್ಲಿಯೂ ಸಹ ಜನರ ಸಮಸ್ಯೆಗಳನ್ನು ಇಲ್ಲೇ ಬಗೆಹರಿಸುವ ಪ್ರಯತ್ನ ಮಾಡಲಾಗುವುದು, ಉಳಿದ ಸಮಸ್ಯೆಗಳನ್ನು ನಿಗದಿತ ಕಾಲಕ್ಕನುಸಾರವಾಗಿ ಬಗೆಹರಿಸಲಾಗುವುದು ಎಂದರು.
ಇದೇ ವೇಳೆ ಗ್ರಾಮದ ಕರೀಗೌಡ, ಸೋಮಣ್ಣ ಸೇರಿದಂತೆ ಹಲವು ಗ್ರಾಮಸ್ಥರು ಗ್ರಾಮದಲ್ಲಿ ಕಾಡಾನೆಗಳ ಆವಳಿ ಹೆಚ್ಚಾಗಿದೆ, ರಸ್ತೆಗಳ ಸರಿಯಾಗಿಲ್ಲ ಜೊತೆಗೆ ನೂರಾರು ಎಕರೆಯಷ್ಟು ಜಮೀನುಗಳು ಸಾಗುವಳಿ, ದುರಸ್ಥಿಯಾಗಬೇಕು, ಅಲ್ಲದೇ ರೈತರು ಸಾಕಷ್ಟು ರಾಗಿಯನ್ನು ಬೆಳೆದಿದ್ದು, ಅದನ್ನು ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸಬೇಕು. ನೈಸರ್ಗಿಕ ವಿಕೋಪ, ಕಾಡಾನೆಗಳ ದಾಳಿಯಿಂದಾಗಿ ಈಗಾಗಲೇ ನಮ್ಮ ರೈತರು ಸಾಕಷ್ಟು ಬೆಳೆ ನಷ್ಟವನ್ನು ಹೊಂದಿದ್ದಾರೆ. ಆದರೆ ಅವರಿಗೆ ಈವರೆಗೂ ಸರಿಯಾದ ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿದರು.
ರೈತರು ತಮ್ಮ ಕೆಲಸಗಳಿಗೆ ನಾಡಕಛೇರಿ, ನೆಮ್ಮದಿ ಕೇಂದ್ರ ಸೇರಿದಂತೆ ಯಾವುದೇ ಸರ್ಕಾರಿ ಕಛೇರಿಗೆ ಹೋದರೆ ಸರ್ಕಾರಿ ಶುಲ್ಕಕ್ಕಿಂತ ಅಧಿಕ ಹಣ ಪಡೆಯುತ್ತಿದ್ದಾರೆ. ಹಣ ಇಲ್ಲ ಎಂದರೆ ಯಾವುದೇ ಕೆಲಸ ಆಗದಂತಾಗಿದೆ ಎಂಬ ಹಲವು ದೂರುಗಳನ್ನು ನೀಡಿದರು.
ದೂರುಗಳನ್ನು ಆಲಿಸಿ ಬಳಿಕ ಮಾತನಾಡಿದ ತಹಸೀಲ್ದಾರ್ ಚಲುವರಾಜು, ಬೆಳೆ ಹಾನಿಗೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಿಗರ ಬಳಿ ಮಾಹಿತಿ ನೀಡಿರುವವರ ಪಟ್ಟಿಯನ್ನು ನೀಡಿದರೆ, ಅದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇನ್ನೂ ದುರಸ್ಥಿಗೆ ಸಂಬಂಧಿಸಿದಂತೆ ಭೂಮಾಪನ ಇಲಾಖೆಯ ಸಹಯೋಗದೊಂದಿಗೆ ಅದರ ಬಗ್ಗೆ ಕ್ರಮವಹಿಸುವ ಬಗ್ಗೆ ಚರ್ಚಿಸಲಾಗುವುದು. ಅಲ್ಲದೆ ಅರ್ಜಿಗಳ ಮೂಲಕ ನೀಡಲಾಗಿರುವ ಸಮಸ್ಯೆಗಳ ಬಗ್ಗೆ ಕೂಡಲೆ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಹರಿಯಾಲಪುರ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಮತ್ತು ರಸ್ತೆ ಸಂಪರ್ಕವನ್ನು ನೀಡಲು ಅರಣ್ಯ ಇಲಾಖೆ ಅನುಮತಿ ನೀಡುತಿಲ್ಲ ಎಂಬ ಸಮಸ್ಯೆಯನ್ನು ಮುಂದಿಟ್ಟರು. ಇದಕ್ಕೆ ತಹಸೀಲ್ದಾರ್ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ವದಗಿಸುವ ಬಗ್ಗೆ ಕ್ರಮವಹಿಸುವ ಭರವಸೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಗೋಪಾಲಸ್ವಾಮಿ, ಎಪಿಎಂಸಿ ಕಾರ್ಯದರ್ಶಿ ವಸಂತ್ ಕುಮಾರ್, ಭೂಮಾಪನ ಇಲಾಖೆಯ ಉಮೇಶ್, ಏತ ನೀರಾವರಿಯ ಉಷಾ, ಲೋಕೋಪಯೋಗಿ ಇಲಾಖೆಯ ರಾಜಯ್ಯ, ಪಶು ಸಂಗೋಪನೆ ಇಲಾಖೆಯ ವೈ.ಡಿ.ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್.ಜಯರಾಜ್, ಉಪಾಧ್ಯಕ್ಷ ಮಂಜುಳ ಶಿವರಾಜು, ಸದಸ್ಯರಾದ ಶಿವಮ್ಮ ನಾಗಣ್ಣ, ಸತೀಶ್, ಮಾಜಿ ಸದಸ್ಯ ವಿನೋದ್ ಕುಮಾರ್, ಮುಖಂಡರಾದ ದೇವದಾಸ್, ಚಂದ್ರೇಗೌಡ, ಶೋಭಾ ಶಿವಲಿಂಗ, ನೂರೋಳಯ್ಯ, ಪಿಡಿಒ ಚೆನ್ನಪ್ಪ.ಮುಳ್ಳೂರು ಗ್ರಾಪಂ ಸದಸ್ಯ ಶಿವರಾಜ್. ಹಳೆಹೆಗ್ಗುಡಿಲುಗ್ರಾಮದ ಪರಶಿವಮೂರ್ತಿ.ಶಂಕರ್. ಮುಂತಾದವರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


