ತುರುವೇಕೆರೆ: ಈ ದೃಶ್ಯ ನೋಡಿದರೆ ನಗಬೇಕೋ, ಅಳಬೇಕೋ ಅಂತ ತಿಳಿಯುತ್ತಿಲ್ಲ. ತಾಲೂಕು ಪಂಚಾಯತ್ ನ ಮುಂಭಾಗದಲ್ಲೇ ಕಸದ ರಾಶಿ ಬಿದ್ದಿದ್ದು, ತಾಲೂಕು ಪಂಚಾಯಿತಿ ಒಳಗಿರುವ ಅಧಿಕಾರಿಗಳ ಹಗಲು ಕುರುಡುತನ ಕಂಡು ಜನರು ಬೇಸತ್ತು ಹೋಗಿದ್ದಾರೆ.
ಹೌದು..! ತುರುವೇಕೆರೆ ತಾಲೂಕು ಪಂಚಾಯತ್ ನ ಸಭಾಂಗಣದ ಮುಂದೆಯೇ ಕಸದ ರಾಶಿ ಇದ್ದು, ಸರಿಯಾಗಿ ಕಸ ವಿಲೇವಾರಿ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಇದೇ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಯುತ್ತಿರುತ್ತದೆ. ಅಧಿಕಾರಿಗಳು ಸಭೆ ನಡೆಸಿ ತಮ್ಮಷ್ಟಕ್ಕೆ ತೆರಳುತ್ತಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಕಸದ ರಾಶಿ ಅಧಿಕಾರಿಗಳ ಕಣ್ಣಿಗೆ ಬೀಳುವುದಿಲ್ಲವೇ? ಏನು ಕೆಲಸ ಮಾಡುತ್ತಿದ್ದಾರೆಂದು ಅಧಿಕಾರಿಗಳು ಸರ್ಕಾರಿ ಸಂಬಳ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನರಿಗೆ ಸ್ವಚ್ಛತೆಯ ಭಾಷಣ ಬಿಗಿಯುವ ಅಧಿಕಾರಿಗಳಿಗೆ ತಾಲೂಕು ಪಂಚಾಯತ್ ಸಭಾಂಗಣದ ಎದುರು ಇರುವ ಕಸದ ರಾಶಿ ಕಾಣದಿರುವುದು 8ನೇ ಅದ್ಭುತವೇ ಸರಿ. ಇನ್ನೂ ದುರಂತದ ವಿಚಾರ ಏನು ಗೊತ್ತಾ? ಶಾಸಕ ಮಸಾಲೆ ಜಯರಾಮ್ ಅವರ ಕಚೇರಿ ಕೂಡ ಇದೇ ಸ್ಥಳದಲ್ಲಿದ್ದು, ಶಾಸಕರೂ ಇದನ್ನು ಗಮನಿಸಿಲ್ಲವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಕಸದ ರಾಶಿಯಲ್ಲಿ ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ಕವರ್ ಗಳೇ ಕಂಡು ಬರುತ್ತಿವೆ. ಸರ್ಕಾರಿ ಕಚೇರಿಯ ಎದುರೇ ಇಂತಹ ದುಸ್ಥಿತಿಯಾದರೆ ಸ್ವಚ್ಛ ಭಾರತದ ಭಾಷಣ ಯಾರಿಗೆ? ಇದೇನಾ ಸ್ವಚ್ಛ ಭಾರತ. ಇದಕ್ಕೇನಾ ಕೋಟಿಗಟ್ಟಲೆ ಜನರ ದುಡ್ಡನ್ನು ಖರ್ಚು ಮಾಡುತ್ತಿರುವುದು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಸುರೇಶ್ ಬಾಬು ಎಂ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5