ತುರುವೇಕೆರೆ: ಸ್ಥಳೀಯ ಬೆಸ್ಕಾಂ ಉಪವಿಭಾಗದ ಕಚೇರಿಯಲ್ಲಿ ರೈತರು ಹಾಗೂ ಜನಸಾಮಾನ್ಯರನ್ನು ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗ್ರಾಹಕರ ಕುಂದುಕೊರತೆ ಸಭೆಯನ್ನು ಬಹಿಷ್ಕರಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿ ತಿಂಗಳ ಮೂರನೇ ಶನಿವಾರ ಬೆಸ್ಕಾಂ ಕಚೇರಿಯಲ್ಲಿ ನಿಯಮಾನುಸಾರ 3 ಗಂಟೆಗೆ ನಡೆಯಬೇಕಾದ ಗ್ರಾಹಕರ ಸಂಪರ್ಕ ಸಭೆಗೆ ತಾಲೂಕಿನ ರೈತರು ಆಗಮಿಸಿದರೆ ಅಧಿಕಾರಿಗಳು ಸಭೆ ಆರಂಭಿಸದೆ ರೈತರ ಬಗ್ಗೆ ನಿರ್ಲಕ್ಷ ಧೋರಣೆ ತಳೆದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಆರೋಪಿಸುತ್ತಾ, ಕಳೆದ ಸೆ. 28 ರಂದು ನಡೆದ ಸಭೆಯಲ್ಲೂ ಸಹ ಇದೇ ರೀತಿಯ ಅಸಡ್ಡೆ ತೋರಲಾಗಿದ್ದು ಮತ್ತೆ ಪುನರಾವರ್ತನೆಯಾಗಿದೆ ಎಂದು ದೂರಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಕಾಮಗಾರಿಗಳ ನಕ್ಷೆ ಹಾಗೂ ದಾಖಲೆಗಳನ್ನು ಕೋರಿ ಅರ್ಜಿ ಸಲ್ಲಿಸಿದರೆ, ಸರಿಯಾದ ಮಾಹಿತಿ ನೀಡದೆ, ಮಾಯಸಂದ್ರ ಹೋಬಳಿ ಸೇರಿದಂತೆ ಇತರೆಡೆ ತಪ್ಪು ದಾಖಲೆಗಳನ್ನು ನೀಡಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ತುರುವೇಕೆರೆ ತಾಲೂಕಿನಲ್ಲಿ ಈ ಹಿಂದೆ ಅನುಷ್ಠಾನಗೊಂಡ ನಿರಂತರ ಜ್ಯೋತಿ ಹಾಗೂ ಅಕ್ರಮ-ಸಕ್ರಮ ಯೋಜನೆಯ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಸ್ಥಳದಲ್ಲಿ ಸರಿಯಾದ ಕಾಮಗಾರಿಗಳು ನಡೆಯದಿದ್ದರೂ ಕೋಟ್ಯಂತರ ರೂಪಾಯಿ ಹೆಚ್ಚುವರಿ ಬಿಲ್ ಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ಈ ಎಲ್ಲಾ ಕಾಮಗಾರಿಗಳ ಬಗ್ಗೆ ಸಮಗ್ರ ಸ್ಥಳ ಪರಿಶೀಲನೆ ಮತ್ತು ಮರು ಅಳತೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಬೆಸ್ಕಾಂ ಅಧಿಕಾರಿಗಳು ರೈತರು, ಸಾರ್ವಜನಿಕರು ಹಾಗೂ ಗುತ್ತಿಗೆದಾರರಿಗೆ ಕನಿಷ್ಠ ಗೌರವ ನೀಡುತ್ತಿಲ್ಲ. ಅಧಿಕಾರಿಗಳು ಜನಸಾಮಾನ್ಯರ ಮೇಲೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂಧನ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಅಲ್ಲದೆ ಕರ್ತವ್ಯಲೋಪ ಎಸಗಿರುವ ಎಇಇ ರಾಜಶೇಖರ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ತಾಲೂಕಿನ ಸಮಸ್ತ ರೈತರೊಂದಿಗೆ ಸೇರಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ಸಂದರ್ಭದಲ್ಲಿ ನೆರೆದಿದ್ದ ರೈತ ಮುಖಂಡರು ಹಾಗೂ ಕಾರ್ಯಕರ್ತರು ಬೆಸ್ಕಾಂ ಅಧಿಕಾರಿಗಳ ಧೋರಣೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ರೈತ ಸಂಘದ ಪದಾಧಿಕಾರಿಗಳು, ಮಹಿಳಾ ಘಟಕದ ಸದಸ್ಯರು ಹಾಗೂ ರೈತರು ಉಪಸ್ಥಿತರಿದ್ದರು.
ಬೆಸ್ಕಾಂ ಎಇಇ ರಾಜಶೇಖರ್ ಹಾಗೂ ಇತರೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕಚೇರಿ ಒಳಗೆ ಸಭೆ ನಡೆಸುವುದಾಗಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಪ್ರತಿಭಟನಾಕಾರರು ಸಭೆಯಲ್ಲಿ ಪಾಲ್ಗೊಳ್ಳದೆ ಕಚೇರಿಯಿಂದ ಹೊರನಡೆದರು.
ಕಿಸಾನ್ ಸಂಘವಿರಬಹುದು, ಕೃಷಿಕ ಸಮಾಜ, ರೈತ ಸಂಘ ಅಥವಾ ಯಾವುದೇ ಸಂಘಟನೆಗಳಾಗಲಿ, ತಾಲೂಕಿನ ಪ್ರತಿಯೊಬ್ಬ ರೈತ ಹಾಗೂ ಸಾಮಾನ್ಯ ನಾಗರಿಕನಿಗೂ ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಹಕ್ಕಿದೆ. ಎಲ್ಲರ ಉದ್ದೇಶವೂ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೇ ಆಗಿದೆ. ಆದರೆ ಸಭೆ ನಡೆಸಲು ನಿಗದಿತ ಜಾಗ ನೀಡದೆ, ಸಭಾಂಗಣದಲ್ಲಿ ಕಡತಗಳನ್ನು ಇಡಲಾಗಿದೆ ಎಂದು ನೆಪ ಹೇಳಿ, ರೈತರಿಗೆ ಬೆಲೆ ನೀಡದ ಅಧಿಕಾರಿಗಳ ಅಹಂಕಾರದ ಧೋರಣೆಯನ್ನು ಖಂಡಿಸಿ ನಾವು ಸಭೆ ಬಹಿಷ್ಕರಿಸಿದ್ದೇವೆಯೆ ಹೊರತು ಬೇರೆ ಯಾವುದೇ ಕಾರಣಕ್ಕಲ್ಲ.
— ಕಣಕೂರು ಚಂದ್ರಶೇಖರ್, ಅಧ್ಯಕ್ಷರು, ರೈತ ಸಂಘ, ಹಸಿರು ಸೇನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
