ತುರುವೇಕೆರೆ: ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ತಮ್ಮ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತ್ ಕುಮಾರ್ ಆರೋಪಿಸಿದರು.
ಅವರು ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರ ಸಹಿ ಇರುವ ಶಿಫಾರಸು ಪತ್ರ ಬಹಿರಂಗಪಡಿಸುತ್ತಾ ಇತ್ತೀಚಿಗೆ ಶಾಸಕರು ನೀಡಿದ್ದ ಬೇಜವಾಬ್ದಾರಿ ಹೇಳಿಕೆಗಳಿಗೆ ಅಧಿಕೃತ ದಾಖಲೆಗಳ ಸಮೇತ ತಿರುಗೇಟು ನೀಡಿದರು. ಕಾಂಗ್ರೆಸ್ ಸರ್ಕಾರದಲ್ಲಿ 13% ಕಮಿಷನ್ ನೀಡದೆ ಕೆಲಸಗಳಾಗುವುದಿಲ್ಲ ಎಂದು ಶಾಸಕರು ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನೀವೇ ಲೇಟರ್ ಹೆಡ್ ನೀಡಿ ಕೆಲಸ ಮಂಜೂರು ಮಾಡಿಸಿಕೊಂಡು ಬಂದಿದ್ದೀರಿ.
ಅಂದ ಮೇಲೆ, ನೀವೇ ಆ 13% ಕಮಿಷನ್ ಕೊಟ್ಟು ಕೆಲಸ ತಂದಿದ್ದೀರಿ. ಹಾಗಿದ್ದರೆ ಆ ಕಮಿಷನ್ ಹಣವನ್ನು ಯಾರಿಗೆ ಕೊಟ್ಟಿದ್ದೀರಿ ಎಂಬುದನ್ನು ಜನತೆಯ ಮುಂದೆ ಸ್ಪಷ್ಟಪಡಿಸಿ. ಇದು ಸಾರ್ವಜನಿಕರ ತೆರಿಗೆ ಹಣ. ಕಾಂಗ್ರೆಸ್ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಟ ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.
ಇನ್ನೂ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ, ವಾಣಿಜ್ಯ ಸಂಕೀರ್ಣದ ಕಾಮಗಾರಿ ಅಧ್ವಾನವಾಗಿದೆ. ಕೆರೆ ಮತ್ತು ಐತಿಹಾಸಿಕ ಸಜೆಂಟ್ ಬಾವಿಯ ಜಾಗವನ್ನು ಮಣ್ಣು ಮುಚ್ಚಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಬಾವಿ ಇದ್ದ ಜಾಗವನ್ನು ಮುಚ್ಚಿ ಅದರ ಮೇಲೆ ಕಾಮಗಾರಿ ನಡೆಸಿದವರು ಯಾರು? ಜನರ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿದರೆ ಶಾಸಕರು ತಾಳ್ಮೆ ಕಳೆದುಕೊಂಡು ಸಿಟ್ಟಾಗುತ್ತಿದ್ದಾರೆ. ಇಂತಹ ಮೈಂಡ್ ಗೇಮ್ ಗಳಿಗೆ ನಾವು ಹೆದರುವುದಿಲ್ಲ, ಇನ್ನು ಕೇವಲ ಒಂದೂವರೆ ವರ್ಷ ಮಾತ್ರ ಕಾಲಾವಕಾಶವಿದ್ದು, ಇನ್ನಾದರೂ ಶಾಸಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಗೋರ್ಣೆ ತುಮಕೂರು ಲಕ್ಷ್ಮೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಳಾಲ ನಾಗರಾಜ್, ಟಿ.ಎನ್ ಶಿವರಾಜ್, ಗುಡ್ಡೆಹಳ್ಳಿ ನಂಜುಂಡಪ್ಪ, ಬಡಗರಹಳ್ಳಿ ರಂಗಸ್ವಾಮಿ ಇತರರು ಇದ್ದರು.
ಕೆ ಆರ್ ಡಿಎಲ್ ಯುಜೆಡಿ ಹಾಗೂ ತಾಲೂಕು ಪಂಚಾಯಿತಿ ಅನುದಾನದ ಕಾಮಗಾರಿಗಳಿಗೂ ನನಗೂ ಸಂಬಂಧವಿಲ್ಲ, ಬೇಕಿದ್ದರೆ ತಮಿಕಿ ಮಾಡಿಕೊಳ್ಳಿ ಎಂದು ಹಾರಿಕೆ ಉತ್ತರ ನೀಡಿದ್ದೀರಿ. ಆದರೆ ಸ್ವತಃ ನೀವೇ ನಿಮ್ಮ ಅಧಿಕೃತ ಲೇಟರ್‌ಹೆಡ್‌ನಲ್ಲಿ ಕಾಮಾರಿಗಳ ಪಟ್ಟಿ ಸಿದ್ಧಪಡಿಸಿ, ಸಹಿ ಮಾಡಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೀರಿ. ನಿಮ್ಮ ಶಿಫಾರಸಿ ನ ಮೇರೆಗೆ ಜಿಲ್ಲಾಧಿಕಾರಿಗಳು ಈ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಶಾಸಕರೇ, ನೀವೇ ಶಿಫಾರಸು ಮಾಡಿ ತಂದ ಕಾಮಗಾರಿಗಳಿಗೆ ನೀವಲ್ಲದೆ ಇನ್ನಾರು ಜವಾಬ್ದಾರರು?
— ಬಿ.ಎಸ್.ವಸಂತ್ ಕುಮಾರ್, ಕಾಂಗ್ರೆಸ್ ಮುಖಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
