ರಾಜ್ಯದಲ್ಲಿ 4ನೇ ಅಲೆ ಕಾಣಿಸಿಕೊಂಡರೂ ಸದ್ಯಕ್ಕೆ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. ಈ ಮೂಲಕ 4ನೇ ಅಲೆ ಬಂದರೆ ಲಾಕ್‍ಡೌನ್ ಸೇರಿದಂತೆ ಕೆಲವು ಕಠಿಣ ನಿಯಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ವದಂತಿಗೆ ಖುದ್ದು ಸಚಿವರೇ ತೆರೆ ಎಳೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ತಿಂಗಳ ಮೊದಲ ವಾರದಲ್ಲಿ ಕೋವಿಡ್ ಅಲೆ ಬರಬಹುದೆಂದು ತಜ್ಞರು ಹೇಳಿದ್ದಾರೆ. ನಾವು ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಇದಕ್ಕಿಂತ ಹೆಚ್ಚಿನ ಕ್ರಮ ಅಗತ್ಯವಿಲ್ಲ ಎಂದು ಹೇಳಿದರು.
60 ವರ್ಷ ಮೇಲ್ಪಟ್ಟು ಉಚಿತ ಬೂಸ್ಟರ್ ಡೋಸ್ ಕೊಡುತ್ತಿದ್ದೇವೆ. 18 ವರ್ಷದವರು ಎರಡನೇ ಲಸಿಕೆ ಪಡೆದು 9 ತಿಂಗಳು ಆದವರೂ ಕೂಡ ಲಸಿಕೆ ಪಡೆಯಬಹುದು ಎಂದು ಸಲಹೆ ಮಾಡಿದರು.ಈ ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಸಭೆ ಕರೆದಿದ್ದು , ಕೆಲವು ಸಲಹೆ , ಸೂಚನೆಗಳನ್ನು ನೀಡಲಿದ್ದಾರೆ. ಈಗ ತೆಗೆದುಕೊಂಡಿರುವ ಕ್ರಮಕ್ಕಿಂತ ಹೆಚ್ಚಿನ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಸದ್ಯಕ್ಕಿಲ್ಲ, ಆದರೆ ಸಭೆಯಲ್ಲಿ ಏನು ತೀರ್ಮಾನ ಆಗುತ್ತದೆಯೋ ನೋಡಬೇಕು ಎಂದರು.ಗುತ್ತಿಗೆ ಆಧಾರದ ಕೋವಿಡ್ ವಾರಿಯರ್ಸ್‍ಗಳನ್ನು 6 ತಿಂಗಳಿಗೆ ತೆಗೆದುಕೊಂಡಿದ್ದೇವು, ಅವರನ್ನು 18 ತಿಂಗಳವರೆಗೂ ಮುಂದುವರೆಸಿಕೊಂಡಿದ್ದೇವೆ. ಕೋವಿಡ್ ಕಡಿಮೆ ಆದ ಕಾರಣ ಅವರನ್ನು ಬಿಡುಗಡೆ ಮಾಡಿದ್ದೇವೆ.
ಈಗ ಇನ್ನು 6 ತಿಂಗಳು ಮುಂದುವರಿಸಿಕೊಂಡು ಹೋಗುವ ಬಗ್ಗೆ ಆರ್ಥಿಕ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.ಬೇರೆ ದೇಶಗಳ ಸ್ಥಿತಿಗತಿ ಅವಲೋಕಿಸಿದರೆ ನಮ್ಮಲ್ಲಿ ಆತಂಕಪಡುವ ಅಗತ್ಯವಿಲ್ಲ. ಪ್ರಧಾನಿಯವರು ಆಯಾ ರಾಜ್ಯಗಳ ಸ್ಥಿತಿಗತಿಯನ್ನು ಪರಾಮರ್ಶಿಸಿ ಕೆಲವು ಸಲಹೆಸೂಚನೆಗಳನ್ನು ನೀಡಬಹುದು. ಅದನ್ನು ಸರ್ಕಾರ ಯಥಾವತ್ತಾಗಿ ಪಾಲನೆ ಮಾಡಲಿದೆ ಎಂದು ಸುಧಾಕರ್ ತಿಳಿಸಿದರು.
ವರದಿ ಆಂಟೋನಿ ಬೇಗೂರು


