ಕಂಪನಿ ವೆಬ್ ಸೈಟ್ ಡೇಟಾ ಅಳಿಸಿ ಹೋಗಿ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ಸುಲಿಗೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಕಿಡ್ನಾಪ್ ಒಳಗಾದ ಅಜಯ್ ಪಾಂಡೆ ಎಂಬಾತ ದೂರು ನೀಡಿದ ಮೇರೆಗೆ ಚೈತನ್ಯ ಶರ್ಮಾ, ವೈಭವ್ ಹಾಗೂ ಅಮಿತ್ ಎಂಬಾತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ನಾಲ್ವರು ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಚೈತನ್ಯ ಬಾಣಸವಾಡಿಯಲ್ಲಿ ಲ್ಯಾಂಪ್ಸ್ ಕಾರ್ಟ್ ಕಂಪನಿಯ ಮಾಲೀಕನಾಗಿದ್ದ. ಉದ್ಯಮಕ್ಕೆ ವೆಬ್ ಸೈಟ್ ಸಿದ್ದಪಡಿಸುವಂತೆ ಅಜಯ್ ಪಾಂಡೆಗೆ ಸೂಚಿಸಿದ್ದ. ಇದರಂತೆ ಪಾಂಡೆ ವೆಬ್ ಡಿಸೈನ್ ಮಾಡಿಕೊಟ್ಟಿದ್ದ. ಒಂದು ವರ್ಷ ತರುವಾಯ ನವೀಕರಣ ಹಾಗೂ ವೆಬ್ ನಿರ್ವಹಣೆಗಾಗಿ ಚೈತನ್ಯಗೆ ಹೆಚ್ಚುವರಿ ಹಣ ಕೇಳಿದ್ದ. ಆದರೆ ಹಣ ಚೈತನ್ಯ ಕೊಟ್ಟಿರಲಿಲ್ಲ.
ಇದರಿಂದ ಅಸಮಾನಧಾನಗೊಂಡು ವೆಬ್ ಸೈಟ್ ನಲ್ಲಿರುವ ಡೇಟಾ ಅಳಿಸಿ ಕಂಪ್ಲೀಟ್ ಶಟ್ಡೌನ್ ಆಗುವಂತೆ ಪಾಂಡೆ ನೋಡಿಕೊಂಡಿದ್ದ. ಇದರಿಂದ ವ್ಯವಹಾರದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಚೈತ್ಯನ ಕೆಂಡಕಾರಿದ್ದ. ಅಲ್ಲದೆ ಒಂದು ವರ್ಷಗಳಿಂದ ಪಾಂಡೆ ದೂರ ಸರಿದಿದ್ದ. ವಾಮಮಾರ್ಗದಿಂದ ಪಾಂಡೆಯನ್ನ ಸಂಪರ್ಕಿಸಿದ್ದ ಆರೋಪಿಗಳು ಏಪ್ರಿಲ್ 23ರಂದು ಯಲಹಂಕದ ಬಿಬಿ ರಸ್ತೆಗೆ ಕರೆಸಿಕೊಂಡಿದ್ದಾರೆ. ನಷ್ಟದ ಹಣ ವಸೂಲಿಗೆ ಕಿಡ್ನ್ಯಾಪ್ ದಾರಿ ಕಂಡುಕೊಂಡಿದ್ದ ಆರೋಪಿಗಳು ಪಾಂಡೆಯನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಹಣ ನೀಡುವಂತೆ ಬೆದರಿಸಿದ್ದಾರೆ.
ಪರಿಚಿತ ವ್ಯಕ್ತಿಯಿಂದ 6.35 ಲಕ್ಷ ಬಲವಂತವಾಗಿ ವರ್ಗಾಯಿಸಿಕೊಂಡು ಪಿಸ್ತೂಲ್ ತೋರಿಸಿ ಬೆದರಿಸಿ ಹಣ ವಸೂಲಿ ಮಾಡಲಾಗಿದೆ ಎಂದು ಆರೋಪಿಸಿ ಪಾಂಡೆ ಠಾಣೆ ಮೆಟ್ಟಿಲೇರಿದ್ದ. ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ಪಿಸ್ತೂಲ್ ಬಳಕೆಯಾಗಿದೆಯಾ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


