ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ಪ್ರಮುಖ ಆರೋಪಿಗಳಾದ ಆರ್.ಡಿ. ಪಾಟೀಲ, ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ ಹಾಗೂ ಮಂಜುನಾಥ ಮೇಳಕುಂದಿಗೆ ತಾವು ಒಟ್ಟಾರೆ ₹ 90 ಲಕ್ಷ ಕೊಟ್ಟಿದ್ದಾಗಿ ಬಂಧಿತ ಮೂವರು ಅಭ್ಯರ್ಥಿಗಳು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸಿಐಡಿ ಕಸ್ಟಡಿಯಲ್ಲಿರುವ ಅಭ್ಯರ್ಥಿಗಳಾದ ವಿಶಾಲ್ ಶಿರೂರ ₹ 40 ಲಕ್ಷ ಹಾಗೂ ಎನ್.ವಿ. ಸುನೀಲಕುಮಾರ ₹ 40 ಲಕ್ಷ ಹಾಗೂ ಹಯ್ಯಾಳಿ ದೇಸಾಯಿ ₹ 10 ಲಕ್ಷ ಹಣವನ್ನು ಇವರಿಗೆ ನೀಡಿದ್ದಾಗಿ ತಿಳಿಸಿದ್ದಾರೆ.
ಆರ್.ಡಿ. ಪಾಟೀಲ, ಮಹಾಂತೇಶ ಪಾಟೀಲ ಹಾಗೂ ಮಂಜುನಾಥ ಮೇಳಕುಂದಿ ತಮಗೆ ಶಾಲೆಯ ಮೇಲ್ವಿಚಾರಕಿಯರ ನೆರವು ಪಡೆದು ಬ್ಲೂಟೂತ್ ಮೂಲಕ ಉತ್ತರ ಬರೆಸಿದ್ದಲ್ಲದೇ, ಓಎಂಆರ್ ಶೀಟ್‌ನಲ್ಲಿ ಸರಿಯಾದ ಉತ್ತರಗಳನ್ನು ಬರೆಯಲು ಸಹಾಯ ಮಾಡಿದ್ದರು ಎಂಬ ಸಂಗತಿಯನ್ನು ಈ ಅಭ್ಯರ್ಥಿಗಳು ವಿಚಾರಣೆ ವೇಳೆ ತಿಳಿಸಿದ್ದಾಗಿ ಸಿಐಡಿ ಮೂಲಗಳು ಹೇಳಿವೆ.
ನಾಲ್ವರಿಗೆ ಹಣ: ‘ಅಭ್ಯರ್ಥಿಗಳು ನೀಡಿದ ಹಣವನ್ನು ಅಣ್ಣ ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ ಹಾಗೂ ತಾನು ಪಡೆದಿರುವುದಾಗಿ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಕಳೆದ ವರ್ಷದ ಅಕ್ಟೋಬರ್ 3ರಂದು ನಡೆದ ಪಿಎಸ್‌ಐ ಪರೀಕ್ಷೆ ಸಂದರ್ಭದಲ್ಲಿ ಆರೋಪಿ ಸುನೀಲಕುಮಾರ ಬಳಸಿದ ಬ್ಲೂಟೂತ್ ಸಾಧನ, ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್‌ಗಳನ್ನು ಪತ್ತೆ ಹಚ್ಚುವ ಯತ್ನದಲ್ಲಿದ್ದೇವೆ’ ಎನ್ನುವುದು ಈ ಮೂಲಗಳ ಮಾಹಿತಿ.
ನಗರಸಭೆ ಮಹಿಳಾ ಸಿಬ್ಬಂದಿ ವಶಕ್ಕೆ
ಪಿಎಸ್‌ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಶಹಾಬಾದ್ ನಗರಸಭೆಯ ದ್ವಿತೀಯ ದರ್ಜೆ ಸಹಾಯಕಿ ಜ್ಯೋತಿ ಪಾಟೀಲ ಎಂಬುವವರನ್ನು ಸಿಐಡಿ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ.ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿನ ಕೇಂದ್ರದಲ್ಲಿ ಪರೀಕ್ಷೆ ಬರೆದ ಸೇಡಂನ ಶಾಂತಿಬಾಯಿ ಬಸ್ಯನಾಯ್ಕ ಎಂಬುವವರಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳುವಲ್ಲಿ ಸಹಕರಿಸಿದ ಆರೋಪ ಇವರ ಮೇಲಿದೆ.
ಬೆಂಗಳೂರಿನ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಕೆಲ ಕಾಲ ಕೆಲಸ ಮಾಡಿ ಇತ್ತೀಚೆಗೆ ಶಹಾಬಾದ್ ನಗರಸಭೆಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ಇಲ್ಲಿಯವರೆಗಿನ ತನಿಖೆಯು ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರಿಗೆ ಸೇರಿದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಕೇಂದ್ರವಾಗಿಸಿಕೊಂಡು ನಡೆಯುತ್ತಿದೆ. ಇದರ ಜೊತೆಗೆ, ಬೆಂಗಳೂರು ಹಾಗೂ ವಿಜಯಪುರದ ಪರೀಕ್ಷಾ ಕೇಂದ್ರಗಳಲ್ಲಿಯೂ ತಮ್ಮ ಪರಿಚಯದ ಅಭ್ಯರ್ಥಿಗಳು ಇಂಥದೇ ಅಕ್ರಮ ನಡೆಸಿರುವ ಬಗ್ಗೆ ಬಂಧಿತ ಅಭ್ಯರ್ಥಿಗಳು ಬಾಯಿಬಿಟ್ಟಿರುವ ಬಗ್ಗೆ ಮೂಲಗಳು ತಿಳಿಸಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


