ಸರಗೂರು: ಅರಣ್ಯ ಹಕ್ಕು ಕಾಯಿದೆ 2006ರ ನಿಯಮ 2008ರ ತಿದ್ದುಪಡಿ 2012ರ ಕಾಯ್ದೆ ಅನುಷ್ಠಾನ ಹಾಗೂ ದರಖಾಸ್ಸು ಸಮಿತಿಗೆ ಬುಡಕಟ್ಟು ಸಮುದಾಯಗಳ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ವತಿಯಿಂದ ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸರಗೂರು ತಾಲೂಕು ವ್ಯಾಪ್ತಿಯಲ್ಲಿ 52 ಹಾಡಿಗಳಿದ್ದು, ಜೇನುಕುರುಬ, ಯರವ, ಸೋಲಿಗ, ಕಾಡುಕುರುಬ ಸಮುದಾಯಗಳು ಸ್ವತಂತ್ರ ಪೂರ್ವದಲ್ಲಿ ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ವಾಸಿಮಾಡುತ್ತಿದ್ದು, 1972ರ ವನ್ಯಜೀವಿ ಸಂರಕ್ಷಣೆ ಕಾಯಿದೆಯಡಿ ಹಾಗೂ ನುಗು ಅಣೆಕಟ್ಟೆ ನಿರ್ಮಿಸುವಾಗ ಸಮುದಾಯಗಳ ಅಭಿವೃದ್ಧಿ ಮತ್ತು ಪುನರ್ವಸತಿ ಬಗ್ಗೆ ಸರಕಾರ ಯಾವುದೇ ಯೋಜನೆ ರೂಪಿಸಿದೆ ಏಕಾಏಕಿ ಹೊರತಂದು ಸಮುದಾಯಗಳನ್ನು ಅತಂತ್ರ ಪರಿಸ್ಥಿತಿಗೆ ತಂದಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಸರಕಾರದ ವಿರುದ್ಧ ನಾನಾ ಘೋಷಣೆ ಕೂಗಿದರು.
ನಿವಾಸಿಗಳಿಗೆ ಪುನರ್ವಸತಿ ಒದಗಿಸಲು ಕಾನೂನಿನಲ್ಲಿ ಅವಕಾಶವಿದ್ದರೂ ಜಡ್ಡುಕಟ್ಟಿದ ಆಡಳಿತ ವ್ಯವಸ್ಥೆ ನೊಂದ ಆದಿವಾಸಿ ಸಮುದಾಯಗಳಿಗೆ ನ್ಯಾಯ ಒದಗಿಸಲು ವಿಳಂಬನೀತಿ ಅನುಸರಿಸಿ ಅರಣ್ಯ ಹಕ್ಕು ಕಾಯಿದೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಅಲ್ಲದೆ ಹಾಡಿಗಳ ನಿವಾಸಿಗಳಿಂದ 1999ರಲ್ಲಿ ಅನುಭವದಲ್ಲಿದ್ದ ಭೂಮಿಗೆ ರದಖಾಸ್ ಸಮಿತಿಗೆ ನಮೂನೆ 53ರಲ್ಲಿ ಲಕ್ಷ್ಮಣಪುರ ಸರ್ವೇ ನಂ.17ಮತ್ತು 21ಕ್ಕೆ 250 ಅರ್ಜಿ ಸಲ್ಲಿಸಿದ್ದರೂ, ಈ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಅರಣ್ಯ ಹಕ್ಕು ಕಾಯಿದೆ 2006ರ ನಿಯಮ 2008ರ ತಿದ್ದುಪಡಿ 2012ರ ಪ್ರಕಾರ ವೈಯಕ್ತಿಕ ಅರಣ್ಯ ಹಕ್ಕಿಗಾಗಿ ಹಾಗೂ ಸಮುದಾಯಕ ಅರಣ್ಯ ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ತುರ್ತಾಗಿ ಅನುಷ್ಠಾನಗೊಳಿಸಬೇಕು. ಯಶವಂತಪುರ, ಎತ್ತಿಗೆ ಎಂಸಿ ತಳಲು, ಅರಳಹಳ್ಳಿಹಾಡಿ ಹಾಗೂ ಚನ್ನಗುಂಡಿ ಹಾಡಿಗಳಿಂದ 1999ರಲ್ಲಿ ಧರಖಾಸ್ಸು ಸಮಿತಿಗೆ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಿ, ಸಮಿತಿ ಮೂಲಕ 250 ಅರ್ಜಿದಾರರಿಗೆ ಭೂಮಿ ಮಂಜುರಾತಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ತಹಶೀಲ್ದಾರ್ ಚಲುವರಾಜು ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅರಣ್ಯ ಮೂಲಬುಡಕಟ್ಟು ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಶೈಲೇಂದ್ರಕುಮಾರ್, ಕಾರ್ಯದರ್ಶಿ ಸಿದ್ದರಾಜು, ಪುಟ್ಟಬಸವ, ಅಯ್ಯಪ್ಪ, ಜೈರಾಜು, ಯಶವಂತಪುರ ನಾಗರಾಜು, ಬಸಪ್ಪ, ರಾಜೇಶ್, ನಿಂಗಣ್ಣ, ಬಸಪ್ಪ, ನಿಂಗಪ್ಪ, ಮಾದ, ಮಹದೇವಮ್ಮ, ಸುವರ್ಣಮ್ಮ, ಆಶಾ, ಬೇಬಿ ಸೇರಿದಂತೆ ತಾಲೂಕಿನ ಹಾಡಿ ನಿವಾಸಿಗಳು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5