ತಿಪಟೂರು: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೋಕಿನ ಪೆದ್ದನಹಳ್ಳಿ ದಲಿತ ಯುವಕರ ಕಗ್ಗೋಲೆ ಪ್ರಕರಣವನ್ನ ದಾರಿತಪ್ಪಿಸುವ ಹುನ್ನಾರ ನಡೆಯುತ್ತಿದ್ದು ಪ್ರಕರಣದ ಪ್ರಮುಖ ಆರೋಪಿಗಳನ್ನ ಬಂಧಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ದಾದಾ ಸಾಹೇಬ್ ಎನ್ ಮೂರ್ತಿ ಸ್ಥಾಪಿತ) ತಿಪಟೂರು ತಾಲ್ಲೋಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಲಾಯಿತು
ಪ್ರತಿಭಟನಾ ನಿರತರನ್ನ ಉದ್ದೇಶಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಎನ್. ಮೂರ್ತಿ ಸ್ಥಾಪಿತ )ಅಧ್ಯಕ್ಷ ಗೌಡನಕಟ್ಟೆ ಅಶೋಕ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಸರ್ಕಾರ ಪರಿಶಿಷ್ಠ ಜಾತಿ ವರ್ಗಗಳಿ ಸೂಕ್ತ ರಕ್ಷಣೆ ನೀಡದೆ ಮೌನ ವಹಿಸಿರುವುದು ಖಂಡನೀಯವಾಗಿದೆ ಎಂದರು.
ಸರ್ಕಾರದ ನಿರ್ಲಕ್ಷ್ಯ ದೋರಣೆಗೆ ಸಾಕ್ಷಿ ಎಂಬತೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೋಕಿನ ಪೆದ್ದನಹಳ್ಳಿಯಲ್ಲಿ ಇಬ್ಬರು ದಲಿತ ಸಮುದಾಯಕ್ಕೆ ಸೇರಿದ ಯುವಕರನ್ನ ಕಳ್ಳತನದ ಆರೋಪಹೊರಿಸಿ ಹಳೇ ಜಾತಿ ವೈಷ್ಯಮ್ಯದ ಹಿನ್ನೆಲೆ ಬರ್ಬರವಾಗಿ ಹತ್ಯೆ ಮಾಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದೆ ಎಂದರು.
ಸರ್ಕಾರ ಪ್ರಕರಣದ ಪ್ರಮುಖ ಆರೋಪಿಗಳನ್ನ ಬಂಧಿಸದೇ ನಿರ್ಲಕ್ಷ್ಯವಹಿಸಿರುವುದು ಪ್ರಕರಣದ ದಿಕ್ಕುತಪ್ಪಿಸುವ ಹುನ್ಮಾರ ಎಂದು ಮೇಲ್ನೋಟಕೆ ಕಂಡುಬರುತ್ತಿದ್ದು, ಪ್ರಕರಣವನ್ನ ಉನ್ನತ ತನಿಖೆ ಒಳಪಡಿಸಬೇಕು ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪೆದ್ದನಹಳ್ಳಿ ಗ್ರಾಮದಲ್ಲಿ ದಲಿತ ಯುವಕರ ಕೊಲೆಯಿಂದ ದಲಿತರು ಗ್ರಾಮದಲ್ಲಿ ವಾಸ ಮಾಡಲು ಹೆದರುವ ಪರಿಸ್ಥಿತಿ ಉಂಟಾಗಿದ್ದು, ದಲಿತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಸಮಾಜವೇ ತಲೆತಗ್ಗಿಸುವಂತೆ ಅಮಾನೀಯವಾಗಿ ಹತ್ಯಾಖಂಡ ನಡೆದಿದ್ದರೂ, ಜಿಲ್ಲೆ ಇಬ್ಬರೂ ಸಚಿವರೂ ಸೇರಿದಂತೆ ಸರ್ಕಾರದ ಯಾವ ಪ್ರತಿನಿಧಿಯೂ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಗಂಭೀರತೆ ಅರಿಯುವ ಕೆಲಸ ಮಾಡದಿರುವುದು ಸರ್ಕಾರ ದಲಿತರ ಮೇಲೆ ಇಟ್ಟಿರುವ ನಿರ್ಲಕ್ಷ್ಯ ಧೋರಣೆಯನ್ನ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀಭಾಗೀಯ ಸಮಿತಿ ಕಾರ್ಯದರ್ಶಿ ಪ್ರಸನ್ನ ಕುಮಾರ್ ನೊಣವಿನಕೆರೆ ಮಾತನಾಡಿ, ರಾಜ್ಯ ಸರ್ಕಾರ ದಲಿತರ ಬಗ್ಗೆ ನಿರ್ಲಕ್ಷ್ಯವಹಿಸಿದೆ ಸರ್ಕಾರ ಪರಿಶಿಷ್ಟ ಜಾತಿ ವರ್ಗಗಳ ಅನುದಾನ ಕಡಿತಗೊಳಿಸಿ ದಲಿತರನ್ನ ಸಂಕಷ್ಟಕ್ಕೆ ದೂಡಿದರೆ ಪ್ರತಿವರ್ಷ ಅಂಬೇಡ್ಕರ್ ಅಭಿವೃದ್ದಿ ನಿಗಮ ಆದಿಜಾಂಬವ ಅಭಿವೃದ್ಧಿ ನಿಗಮ ಸೇರಿದತೆ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ನಿಗಮಗಳಿಗೆ ನೀಡುತ್ತಿದ್ದು, ಅನುದಾನ ಕಡಿತಗೊಳಿಸಿದ್ದು ಇಲಾಖಾವಾರು ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನ ಕಡಿತಗೊಳಿಸಿರುವುದು ಸರ್ಕಾರ ದಲಿತ ವಿರೋಧಿ ಧೋರಣೆಯ ಪ್ರತೀಕವಾಗಿದೆ ಎಂದರು.
ರಾಜ್ಯದಲ್ಲಿ ನಡೆದಿರುವ ದಲಿತರ ಮೇಲಿನ ಹತ್ಯೆ ಹಾಗೂ ದೌರ್ಜನ್ಯ ಪ್ರಕರಣಗಳು ಪೊಲೀಸ್ ಇಲಾಖೆಯ ವೈಫಲ್ಯದ ಪರಿಣಾಮವಾಗಿ ನ್ಯಾಯಾಲಯದಲ್ಲಿ ಪ್ರಕರಣಗಳು ಸೋಲನ್ನಪ್ಪುತ್ತಿದ್ದು, ದಲಿತರ ಮೇಲೆ ದಿನೇ ದಿನೇ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಜಿಲ್ಲೆಯಲ್ಲಿ ನಡೆದಿರುವ ಕೊಲೆ ಪ್ರಕರಣ ಸೂಕ್ತವಾಗಿ ತನಿಖೆ ನಡೆಸಬೇಕು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು.
ಪೆದ್ದನಹಳ್ಳಿ ದಲಿತ ಯುವಕರ ಹತ್ಯಾಪ್ರಕರಣದ ಪ್ರಮುಖ ಆರೋಪಿಗಳನ್ನ ಬಂಧಿಸಿ ಕಠಿಣ ಕಾನೂನು ಕ್ರಮಜರುಗಿಸಬೇಕು. ಮೃತ ಯುವಕರ ಕುಟುಂಬಕ್ಕೆ ತಲಾ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಮೃತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ದೌರ್ಜನ್ಯ ಪ್ರತಿಬಂದಕ ಕಾಯ್ದೆಯನ್ನ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಕಾಶ್ ಬೆನಾಯ್ಕನಹಳ್ಳಿ, ಆದಿಜಾಂಬವ ಸಂಘದ ಅಧ್ಯಕ್ಷ ಪೆದ್ದಿಹಳ್ಳಿ ನರಸಿಂಹಯ್ಯ, ದಲಿತ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗ್ಯಾರಘಟ್ಟ, ಶಿವರಾಜ್.ಗಂಗಾಧರ್ ಈರಲಗೆರೆ, ಸಂತೋಷ್ ನಾಗ್ತಿಹಳ್ಳಿ, ರಾಜಣ್ಣ, ತಿಮ್ಮಯ್ಯ, ಕಲ್ಲೇಶ್ ಶೆಟ್ಟಿಹಳ್ಳಿ, ಡಿ.ಕುಮಾರ್, ಮಂಜುನಾಥ್ ರವೀಶ್, ಬಂಡೆ ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


