ತುಮಕೂರು: ಅಮಾನಿಕೆರೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.
ಕುರಿತು ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿದ ಕ್ರೇಜಿಸ್ಟಾರ್ ಅಭಿಮಾನಿಗಳು, ಕನ್ನಡ ಸಿನಿಚಿತ್ರರಂಗಕ್ಕೆ ವಿ.ರವಿಚಂದ್ರನ್ ಹೊಸರಂಗು ತಂದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇಲ್ಲದೇ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನಲ್ಲಿ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ ಎಂದರು.
ರವಿಚಂದ್ರನ್ ಅವರು, ಕನ್ನಡದ ಖ್ಯಾತ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರ ಮಗ. ತಂದೆಯಾದ ಎನ್.ವೀರಸ್ವಾಮಿ ಅವರು ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದೊಡನೆ ಈಶ್ವರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು.
ರವಿಚಂದ್ರನ್ ಒಬ್ಬ ಬಹುಮುಖ ಪ್ರತಿಭೆಯ ನಟ, ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು.
ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಮನಸೂರೆ ಮಾಡುವ ಸಂಗೀತ, ರಂಗುರಂಗಿನ ಸೆಟ್ಟುಗಳು, ಪ್ರತಿಯೊಂದು ಫ಼್ರೇಮಿನಲ್ಲೂ ಹೊಸತನ. ಆಯಾ ಕಾಲಗಟ್ಟಕ್ಕೆ ಾಧುನಿಕ ತಂತ್ರಜ್ಞಾನವನ್ನು ಕನ್ನಡಕ್ಕೆ ತಂದ ಹಿರಿಮೆ ರವಿಚಂದ್ರನ್ ಅವರದು.
ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಆಣ್ಣಯ್ಯ, ಗಡಿಬಿಡಿ ಗಂಡ, ರಸಿಕ, ಕಲಾವಿದ, ಸಿಪಾಯಿ, ಪುಟ್ನಂಜ, ಕನಸುಗಾರ, ಮಾಂಗಲ್ಯಂ ತಂತುನಾನೇನ, ಪ್ರೀತ್ಸೋದ್ ತಪ್ಪಾ, ಯಾರೇ ನೀನು ಚೆಲುವೆ, ನಾನು ನನ್ನ ಹೆಂಡ್ತೀರು, ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ರಾಮಕೃಷ್ಣ, ಕೋದಂಡರಾಮ, ಅಹಂ ಪ್ರೇಮಾಸ್ಮಿ, ಸಾಹುಕಾರ, ಹಠವಾದಿ, ಹೂ, ಅಪೂರ್ವ, ಮುಂತಾದ ಜನಪ್ರಿಯ ಚಿತ್ರಗಳನ್ನು ಇವರು ಚಂದನವನಕ್ಕೆ ನೀಡಿದ್ದಾರೆ ಎಂದರು.
ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರಿಗೆ ಎರಡೆರಡು ಡಾಕ್ಟರೇಟ್ ಬಿರುದುಗಳು ಬಂದಿರುವುದು ಅವರ ಅಭಿಮಾನಿಗಳಾದ ನಮ್ಮೆಲ್ಲರಿಗೂ ಸಹ ತುಂಬಾ ಸಂತೋಷದ ವಿಷಯವಾಗಿದೆ. ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಅಭಿನಯದ ಮೊದಲ ತ್ರಿವಿಕ್ರಮ ಚಿತ್ರವು ಶತದಿನೋತ್ಸವ ಆಚರಿಸಲೇಂದು ಕ್ರೇಜಿಸ್ಟಾರ್ ಅಭಿಮಾನಿಗಳು ಹಾರೈಸಿದರು .
ಇದೇ ಸಂದರ್ಭದಲ್ಲಿ ತುಮಕೂರು ಸಿಪಾಯಿ ರವಿಚಂದ್ರನ್ ಸೇನೆಯ ಜಿ.ಎಲ್.ನಟರಾಜು, ರಮೇಶ್, ಜಗದೀಶ್ , ಸಿದ್ದಲಿಂಗಯ್ಯ, ಪರಮೇಶ್ ಹರ್ಷ, ನೂರುಲ್ಲಾ , ದಾದಾಪೀರ್ , ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿ ಬಳಗದವರು ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


