ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿಯ ಅಮಾನತುಗೊಂಡ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಪ್ರಯಾಗ್ರಾಜ್ ಮತ್ತು ಸಹರಾನ್ಪುರದಲ್ಲಿ ಜನರು ಪೊಲೀಸ್್ಮ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಉತ್ತರ ಪ್ರದೇಶದ ನಾಲ್ಕು ನಗರಗಳಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಪ್ರತಿಭಟನೆಗಳು ಭುಗಿಲೆದ್ದಿವೆ.
ರಾಜ್ಯದ ಆರು ಜಿಲ್ಲೆಗಳಲ್ಲಿ ಪೊಲೀಸರು 130ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಪ್ರಯಾಗ್ರಾಜ್ನಲ್ಲಿ ನಡೆದ ಗಲಭೆಯಲ್ಲಿ ಕೆಲವು ದ್ವಿಚಕ್ರ ವಾಹನ ಮತ್ತು ಬಂಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸ್ ವಾಹನವೊಂದನ್ನು ಬೆಂಕಿಗೆ ಆಹುತಿ ನೀಡಲು ಪ್ರಯತ್ನಿಸಲಾಗಿದೆ. ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ನಿಯಂತ್ರಿಸಿದರು. ಪ್ರದೇಶದಲ್ಲಿನ ಗಲಭೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ.
“ಶುಕ್ರವಾರ ರಾತ್ರಿ 9.45ರವರೆಗೆ ರಾಜ್ಯದ ಆರು ಜಿಲ್ಲೆಗಳಲ್ಲಿ ಗಲಭೆಯಲ್ಲಿ ಪ್ರತಿಭಟಿಸುತ್ತಿದ್ದ ಸುಮಾರು 136 ದುಷ್ಕರ್ಮಿಗಳನ್ನು ಬಂಧಿಸಲಾಗಿದೆ” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಶಾಂತಿ ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದರು. ಸಹರಾನ್ಪುರದಲ್ಲಿ 45, ಪ್ರಯಾಗ್ರಾಜ್ 37, ಅಂಬೇಡ್ಕರ್ ನಗರ 23, ಹತ್ರಾಸ್ನಲ್ಲಿ 20, ಮೊರಾದಾಬಾದ್ 7 ಮತ್ತು ಫಿರೋಜೋಬಾದ್ನಲ್ಲಿ 4 ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಅಮಾನತುಗೊಂಡಿರುವ ಬಿಜೆಪಿಯ ವಕ್ತಾರೆ ನೂಪುರ್ ಶರ್ಮಾ ಅವರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಅವರಿಗೆ ಮರಣದಂಡನೆ ವಿಧಿಸುವಂತೆ ಸಹರಾನ್ಪುರದಲ್ಲಿ ಪ್ರತಿಭಟನಾಕಾರರು ಒತ್ತಾಯಿಸಿದರು. ನೂಪುರ್ ಮತ್ತು ನವೀನ್ ಕುಮಾರ್ ವಿರುದ್ಧ ಬಿಜ್ನೂರ್, ಮೊರಾದಾಬಾದ್, ರಾಮ್ಪುರ ಮತ್ತು ಲಖನೌದಲ್ಲೂ ಪ್ರತಿಭಟನೆ ನಡೆಸಲಾಯಿತು.
ಪ್ರಯಾಗ್ರಾಜ್ನಲ್ಲಿ ಸುಮಾರು 15 ನಿಮಿಷಗಳ ಕಾಲ ಕಲ್ಲು ತೂರಾಟ ನಡೆಯಿತು ಎಂದು ಸ್ಥಳೀಯರು ಹೇಳಿದರು. “ಹಿಂಸಾಚಾವನ್ನು ನಿಯಂತ್ರಿಸಲು ಪೊಲೀಸರ ಸಣ್ಣ ತಂಡವನ್ನು ಬಳಸಲಾಗಿದೆ. ಪ್ರಯಾಗ್ರಾಜ್ನಲ್ಲಿ ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದೆ. ಹಿಂಸಾಚಾರವನ್ನು ಬಿಟ್ಟು ಶಾಂತಿಯುತ ರೀತಿಯಲ್ಲಿ ಪ್ರತಿಭಟಿಸುವಂತೆ ಜನರಲ್ಲಿ ಕೇಳುತ್ತೇನೆ” ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ಥಿ ಮನವಿ ಮಾಡಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz