ಎಐಸಿಸಿ ಪ್ರಮುಖ ನಾಯಕ ರಾಹುಲ್‍ಗಾಂಧಿ ಎರಡನೇ ದಿನವಾದ ಇಂದು ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ನಿನ್ನೆ ಸುದೀರ್ಘ 10 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ತನಿಖಾ ಸಂಸ್ಥೆಗೆ ಸಮಾಧಾನಕರ ಉತ್ತರ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಹಿವಾಟಿಗೆ ಸಂಬಂಸಿದಂತೆ ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪಕ್ಕಾಗಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಮೂರು ಬಾರಿ ನೋಟಿಸ್ ನೀಡಲಾಗಿತ್ತು. ಅಂತಿಮವಾಗಿ ನಿನ್ನೆ ರಾಹುಲ್‍ಗಾಂಧಿ ತನಿಖಾ ಸಂಸ್ಥೆ ಮುಂದೆ ಹಾಜರಾದರು. ಅದಕ್ಕೂ ಮುನ್ನಾ ಎರಡು ಕಿಲೋ ಮೀಟರ್ ವರೆಗೂ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಆಗಮಿಸಿದ್ದರು.
ರಾಹುಲ್ ಗಾಂಧಿಗೆ ಬೆಂಬಲ ವ್ಯಕ್ತ ಪಡಿಸಿ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಇದರಿಂದ ಅಸ್ತವಸ್ತ ವಾತಾವರಣ ನಿರ್ಮಾಣವಾಗಿತ್ತು.ಮುಂಜಾಗೃತೆಯಾಗಿ ಪೊಲೀಸರು ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ಬಂಧಿಸಿದ್ದರು.
ಭಾರೀ ಮೆರವಣಿಗೆಯೊಂದಿಗೆ ವಿಚಾರಣೆಗೆ ಹಾಜರಾದ ರಾಹುಲ್‍ಗಾಂಧಿಯನ್ನು ಜಾರಿ ನಿರ್ದೇಶನಾಲಯ 10 ಗಂಟೆಗಳ ಕಾಲ ಪ್ರಶ್ನಿಸಿತ್ತು.
ರಾತ್ರಿ 9:30ರ ವೇಳೆಗೆ ರಾಹುಲ್ ಗಾಂಧಿ ಅವರ ಲಿಖಿತ ಹೇಳಿಕೆ ಸಿದ್ಧವಾಗಿತ್ತು. ಅದರಲ್ಲಿರುವ ತಪ್ಪುಗಳನ್ನು ಸರಿ ಪಡಿಸಿ, ಸರಿಯಾದ ಹೇಳಿಕೆ ನೀಡುವಂತೆ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ಅವರಿಗೆ ಸೂಚಿಸಿತ್ತು ಎಂದು ಹೇಳಲಾಗಿದೆ.
ಆದರೆ ತಮ್ಮ ಹೇಳಿಕೆ ಬದ್ಧವಾಗಿದ್ದ ರಾಹುಲ್ ಗಾಂಧಿ ಹೇಳಿಕೆ ಬದಲಿಸಲು ನಿರಾಕರಿಸಿದ್ದಾರೆ. ಪ್ರತಿಯೊಂದು ಪ್ರಶ್ನೆಗೂ ಪ್ರಜ್ಞಾ ಪೂರ್ವಕವಾಗಿ ಉತ್ತರಿಸಿದ್ದಾರೆ. ರಾಹುಲ್ ಗಾಂಧಿ ಅವರ ವಕೀಲರು ಸಂಪೂರ್ಣ ತಯಾರಿ ನೀಡಿದ್ದು, ಜಾರಿ ನಿರ್ದೇಶನಾಲಯದ ಪ್ರಶ್ನೆಗಳಿಗೆ ಸಂದಿಗ್ಧತೆ ಇಲ್ಲದೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಈ ಉತ್ತರಗಳಿಂದ ತೃಪ್ತರಾಗದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಅದರ ಪ್ರಕಾರ ಇಂದು ಬೆಳಗ್ಗೆ ರಾಹುಲ್‍ಗಾಂಧಿ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.
ಇಂದು ಕೂಡ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ರಾಹುಲ್‍ಗಾಂಧಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. ನಿನ್ನೆ ನಡೆದ ಉದ್ರಿಕ್ತ ಪರಿಸ್ಥಿತಿ ಹಿನ್ನೆಲೆಯಲ್ಲಿ ಇಂದು ಭಾರಿ ಬಿಗಿ ಭದ್ರತೆ ಆಯೋಜಿಸಲಾಗಿತ್ತು. ಕಾರ್ಯಕರ್ತರು ಬೀದಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನಿರಾಕರಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಅಕ್ಬರ್ ರಸ್ತೆಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಕಚೇರಿಯ ಒಳಗಡೆ ಪ್ಲೆಕಾರ್ಡ್ ಹಿಡಿದು ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ನಡೆಸಿದರು. ಎಐಸಿಸಿ ಕಚೇರಿಯತ್ತ ಬರುತ್ತಿದ್ದ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ಅಲ್ಲಲ್ಲೆ ತಡೆದು ಹೆಚ್ಚಿನ ಜನಸಂದಣಿಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು.
ಸಹೋದರಿ ಪ್ರಿಯಾಂಕ ಗಾಂಧಿ ಇಂದು ಬೆಳಗ್ಗೆ ಕೂಡ ನಿನ್ನೆಯಂತೆ ಅಣ್ಣ ರಾಹುಲ್‍ಗಾಂಧಿ ಮನೆಗೆ ತೆರಳಿ ಬೆಂಬಲ ವ್ಯಕ್ತ ಪಡಿಸಿದ್ದರು. ರಾಹುಲ್‍ಗಾಂಧಿ ಮುಂದುವರೆದ ವಿಚಾರಣೆಗೆ ಎಐಸಿಸಿ ನಾಯಕರು ತುರ್ತು ಪತ್ರಿಕಾಗೋಷ್ಠಿ ನಡೆಸಿ ಇಂದು ಬೆಳಗ್ಗೆ ಕಿಡಿಕಾರಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz