ದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುಡು ಬಿಸಿಲಿನ ಅಬ್ಬರ ಮನೆ ಮಾಡಿತ್ತು. ಆದರೆ ಇದೀಗ ಕೊಂಚ ಮಳೆಯಾದ ಕಾರಣ ಬಿಸಿಲಿನ ಬೇಗೆಗೆ ತತ್ತರಿಸಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಸದ್ಯ ನೈರುತ್ಯ ಮಾರುತ ಉತ್ತರ ಭಾರತಕ್ಕೆ ಯಾವಾಗ ಪ್ರವೇಶಿಸುತ್ತದೆ ಎಂಬುದರ ಕುರಿತು ಹವಾಮಾನ ಇಲಾಖೆ ವರದಿ ಬಿಡುಗಡೆ ಮಾಡಿದೆ.
ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯ ಪ್ರಕಾರ, ನೈರುತ್ಯ ಮಾನ್ಸೂನ್ ದೇಶದ ಮಧ್ಯ ಮತ್ತು ಪೂರ್ವ ಭಾರತದತ್ತ ಸಾಗಿದೆ. ಜೂನ್ 23 ರಿಂದ 29 ರವರೆಗೆ ವಾಯುವ್ಯ ಭಾರತದ ಹಲವು ಭಾಗಗಳನ್ನು ಮಳೆ ಸುರಿಯಲಿದೆ. ಇದರೊಂದಿಗೆ ಜೂನ್ 16 ರಿಂದ 2 ದಿನಗಳವರೆಗೆ ತಾಜಾ ವೆಸ್ಟರ್ನ್ ಡಿಸ್ಟರ್ಬನ್ಸ್ ಕೂಡ ಕಂಡುಬಂದಿದೆ ಎಂದು ಇಲಾಖೆ ತಿಳಿಸಿದೆ. ಈ ಎರಡೂ ಕಾರಣಗಳಿಂದಾಗಿ, ದೇಶದ ಎಲ್ಲಾ ಭಾಗಗಳಲ್ಲಿ ತಂಪಿನ ವಾತಾವರಣ ಕಂಡುಬಂದಿದೆ.
ಇದೇ ಜೂನ್ 29ರವರೆಗೆ ಇದೇ ಸ್ಥಿತಿ ಮುಂದುವರಿಯಲಿದ್ದು, ಬಿಸಿಲಿನ ತಾಪದಿಂದ ಜನರಿಗೆ ಕೊಂಚ ಮುಕ್ತಿ ಸಿಗಲಿದೆ ಎಂದು ಇಲಾಖೆ ತಿಳಿಸಿದೆ. ಈ ಹಿಂದೆ, ಜೂನ್ 2 ರಿಂದ ಇಡೀ ವಾಯುವ್ಯ ಭಾರತ ಮತ್ತು ಜೂನ್ 10 ರಿಂದ ಮಧ್ಯ ಭಾರತದಲ್ಲಿ ಬಿಸಿಲಿನ ಶಾಖ ತೀವ್ರವಾಗಿತ್ತು.
ಜೂನ್ 23 ರಿಂದ ಮುಂಗಾರು ಪ್ರವೇಶ:
ಮುಂದಿನ ವಾರದಿಂದ ಉತ್ತರ ಭಾರತಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ಇಲಾಖೆ ತಿಳಿಸಿದೆ. ಜೂನ್ 16 ಮತ್ತು 22 ರ ನಡುವೆ ದೆಹಲಿ, ಚಂಡೀಗಢ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಅಲ್ಲಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಜೂನ್ 23ರಿಂದ ಮುಂಗಾರು ಪ್ರವೇಶಿಸಲಿದ್ದು, ಇಡೀ ದೇಶದಲ್ಲಿ ಮುಂಗಾರು ಮಳೆಯ ಪ್ರಕ್ರಿಯೆ ಆರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ವಾಯುವ್ಯ ಭಾರತದ ಗರಿಷ್ಠ ತಾಪಮಾನದಲ್ಲಿ 2ರಿಂದ 4 ಡಿಗ್ರಿಗೆ ಇಳಿಕೆಯಾಗುವ ಎಲ್ಲ ಸಾಧ್ಯತೆಗಳಿವೆ.
ಹವಾಮಾನ ಇಲಾಖೆ ತಜ್ಞ ಅಭಿಷೇಕ್ ಆನಂದ್ ಮಾತನಾಡಿ, ಮುಂಗಾರು ಆಗಮನಕ್ಕೂ ಮುನ್ನ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ಎಲ್ಲೋ ಅಲರ್ಟ್’ ಘೋಷಿಸಲಾಗಿದೆ. ಮುಖ್ಯವಾಗಿ ಪರ್ವತ ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದು. ಈ ಹಿನ್ನೆಲೆಯಲ್ಲಿ ಭೂಕುಸಿತ ಮತ್ತು ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿ ಅಪಾಯವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಮಳೆಗಾಲದಲ್ಲಿ ಮಲೆನಾಡಿನತ್ತ ಪ್ರಯಾಣಿಸುವುದನ್ನು ತಪ್ಪಿಸಿದರೆ ಉತ್ತಮ. ಇನ್ನುಳಿದ ಪ್ರದೇಶಗಳಲ್ಲಿ ಮುಂದಿನ 3 ತಿಂಗಳ ಕಾಲ ಅಲ್ಪಸ್ವಲ್ಪ ಮಳೆಯಾಗಲಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz