ಸರಗೂರು: ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ನೆರೆಯಿಂದಾಗಿ 15ಕ್ಕೂ ಹೆಚ್ಚು ಮನೆಗಳು ಕುಸಿತಗೊಂಡಿದ್ದು, ವಾಸಿಸಲು ಯೋಗ್ಯ ಮನೆ ಇಲ್ಲದೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಕಂದಾಯ ಇಲಾಖಾಧಿಕಾರಿಗಳು ಮನಬಂದಂತೆ ಪರಿಹಾರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಬಿನಿ ಜಲಾಶಯ ನಿರ್ಮಾಣಗೊಂಡ ಬಳಿಕ ಗ್ರಾಮವನ್ನು ಸ್ಥಳಾಂತರ ಮಾಡಲಾಗಿದ್ದು, ಗ್ರಾಮದಲ್ಲಿರುವ ಮನೆಗಳು ಸಂಪೂರ್ಣವಾಗಿ ಮಣ್ಣಿನಿಂದ ನಿರ್ಮಾಣಗೊಂಡಿರುವ ಮನೆಗಳಾಗಿವೆ. ಹೀಗಾಗಿ ಮಳೆಗೆ ಮಣ್ಣಿನ ಗೋಡೆಗಳು ಹಾಗೂ ಮೇಲ್ಛಾವಣಿ ಕುಸಿದಿದೆ.
ಗ್ರಾಮದ ಸಣ್ಣಮ್ಮ ಬಸವನಾಯಕ, ಸಿದ್ದಮ್ಮ ಬಸವರಾಜು, ದೇವಮ್ಮ ಚಿಕ್ಕನಾಯಕ, ಕಾಳನಾಯಕ ತಿಮ್ಮನಾಯಕ, ಸುಧಾ ಶಿವಪ್ಪ, ನಾಗಮ್ಮ ಪುಟ್ಟಲಿಂಗನಾಯಕ, ದೇವಮ್ಮರಾಮನಾಯಕ, ಸವಿತಾ ರೇವಣ್ಣ, ಜಯಶ್ರೀ ಮಹೇಶ್, ಕಮಲಮ್ಮ ಇಂದ್ರನಾಯಕ ಅವರ ಮನೆಗಳು ಸಂಪೂರ್ಣ ಕುಸಿತಗೊಂಡಿದ್ದು, ಕಂದಾಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ನೀಡದೇ ಮೀನಾಮೇಷ ಎಣ ಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದೇವಮ್ಮರಾಮನಾಯಕ ಅವರಿಗೆ ವಿಕಲಚೇತನ ಮಗನಿದ್ದು, ಜೀವನಕ್ಕಾಗಿ ಕೂಲಿನಾಲಿ ಮಾಡುತ್ತಿದ್ದಾರೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಕೇವಲ 5 ಸಾವಿರ ರೂ. ಪರಿಹಾರ ನೀಡಿದ್ದಾರೆ. ಜತೆಗೆ ಕಮಲಮ್ಮ ಇಂದ್ರನಾಯಕ ಅವರು ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಗುಡಿಸಲಿನ ಗೋಡೆ ಮಳೆಗೆ ಕುಸಿದಿದ್ದು, ಹಾವು ಚೇಳುಗಳು ನುಗ್ಗುತ್ತಿವೆ. ಹೀಗಾಗಿ ಕೂಡಲೇ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಕಂದಾಯ ಇಲಾಖಾಧಿಕಾರಿಗಳು ಲಂಚ ನೀಡಿದವರಿಗೆ ಮಾತ್ರ ಹೆಚ್ಚಿನ ಪರಿಹಾರ ನೀಡುತ್ತಿದ್ದು, ನಿಜವಾದ ಫಲಾನುಭವಿಗಳಿಗೆ ಪರಿಹಾರ ವಿತರಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಸೂಕ್ತ ಪರಿಹಾರ ನೀಡಲು ಕಂದಾಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy