ಶಿವಮೊಗ್ಗ: ಯುವಕನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕಾರ್ಯಾಚರಣೆ ವೇಳೆ ಆರೋಪಿ ಜೆ.ಸಿ. ನಗರ ನಿವಾಸಿ ಮೊಹಮ್ಮದ್ ಜಬಿ ಅಲಿಯಾಸ್ ಚರ್ಬಿಯನ್ನು ಗುಂಡು ಹಾರಿಸಿ ಬಂಧಿಸಲಾಗಿದೆ.
ಯುವಕನಿಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ನದೀಮ್ ಹಾಗೂ ಅಬ್ದುಲ್ ರೆಹೆಮಾನ್ ರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿ ಮುಖ್ಯ ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದರು.
ಇಂದು ಮುಂಜಾನೆ 4 ಗಂಟೆ ಸುಮಾರಿನಲ್ಲಿ ತೀರ್ಥಹಳ್ಳಿ ರಸ್ತೆಯ ಫಲಕ್ ಸಮುದಾಯ ಭವನದ ಬಳಿ ಆರೋಪಿ ಮೊಹಮ್ಮದ್ ಜಬಿ ಇರುವ ಖಚಿತ ಮಾಹಿತಿಯೊಂದಿಗೆ ವಿನೋಬ ನಗರ ಠಾಣೆ ಪಿ.ಎ. ಮಂಜುನಾಥ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳುತ್ತಿದ್ದಂತೆ ಪೊಲೀಸರನ್ನು ಕಂಡ ಆರೋಪಿ ಮೊಹಮ್ಮದ್ ಚಾಕುವಿನಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆನ್ನಲಾಗಿದೆ. ಈ ವೇಳೆ ತಕ್ಷಣ ಪಿಎಸ್‍ಐ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಆದರೆ ಪೊಲೀಸರ ಮಾತಿಗೆ ಕಿವಿಗೊಡದೆ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮ ರಕ್ಷಣೆಗಾಗಿ ಮಂಜುನಾಥ್ ಅವರು ಹಾರಿಸಿದ ಗುಂಡು ಆರೋಪಿಯ ಬಲಗಾಲಿಗೆ ತಗುಲಿ ಆತ ಕುಸಿದು ಬಿದ್ದಿದ್ದಾನೆ.
ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ನಗರದ ಮೆಗಾನ್ ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz