ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮನೆ ಮೇಲೆ ತ್ರಿವರ್ಣ ಧ್ವಜ ಕಟ್ಟುತ್ತಿದ್ದ ವ್ಯಕ್ತಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಮನಕಲುಕುವ ಘಟನೆ ಸಿಲಿಕಾನ್ ಸಿಟಿಯ ಹೆಚ್ ಬಿಆರ್ ಲೇಔಟ್ ನಲ್ಲಿ ನಡೆದಿದೆ. ವಿಶುಕುಮಾರ್ (33) ಮೃತ ದುರ್ದೈವಿಯಾಗಿದ್ದಾರೆ.
ಬೆಂಗಳೂರಿನ ಹೆಚ್ ಬಿಆರ್ ಲೇಔಟ್ ನಲ್ಲಿ ದುರ್ಘಟನೆ ನಡೆದಿದ್ದು, ವಿಶುಕುಮಾರ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ದಕ್ಷಿಣ ಕನ್ನಡದ ಸುಳ್ಯ ಮೂಲದವರಾದ ವಿಶುಕುಮಾರ್ ನಿನ್ನೆ ಮಧ್ಯಾಹ್ನ 1.45 ಸುಮಾರಿಗೆ ತ್ರಿವರ್ಣ ಧ್ವಜ ಕಟ್ಟಲು ಎರಡನೇ ಮಹಡಿಯಲ್ಲಿರುವ ಮನೆ ಟೇರಸ್ ಮೇಲೆ ಏರಿದ್ದಾರೆ. ಈ ವೇಳೆ ಆಯತಪ್ಪಿ 30 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ವಿಶುಕುಮಾರ್ ತಲೆಗೆ ಗಂಭೀರ ಗಾಯವಾಗಿದೆ.
ತಕ್ಷಣವೇ ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ವಿಶುಕುಮಾರ್ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಲೆಗೆ ತೀವ್ರ ಪೆಟ್ಟಾದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ವಿಶುಕುಮಾರ್ ಕೊನೆಯುಸಿರೆಳೆದಿದ್ದಾರೆ.
ಮೃತರಿಗೆ ಹೆಂಡತಿ ಹಾಗೂ 2 ವರ್ಷದ ಮುದ್ದಾದ ಮಗುವಿದೆ. ಇನ್ನೂ ಮಗನ ಸಾವಿನ ಸಂಬಂಧ ವಿಶುಕುಮಾರ್ ತಂದೆ ನಾರಾಯಣ ಭಟ್ ದೂರು ನೀಡಿದ್ದು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಬಾಳಿ ಬದುಕಬೇಕಾಗಿದ್ದ, ಸುಂದರ ಕುಟುಂಬ ಹೊಂದಿದ್ದ ವಿಶುಕುಮಾರ್ ಸಾವು ಕುಟುಂಬಸ್ಥರಿಗೆ ನೋವು ತಂದಿದೆ. ಇನ್ನೂ ದೇಶ ಪ್ರೇಮ ಮೆರೆಯಲು ರಾಷ್ಟ್ರಧ್ವಜ ಕಟ್ಟಲು ಮುಂದಾದ ವ್ಯಕ್ತಿ ಈ ರೀತಿ ಮೃತಪಟ್ಟಿರುವುದು ದುರಂತವೇ ಸರಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy