ಹಿರಿಯೂರು: ಸರ್ಕಾರ ಬುಡಕಟ್ಟು ಹಿನ್ನೆಲೆ ಹೊಂದಿರುವ ಕಾಡುಗೊಲ್ಲ ಜನಾಂಗವನ್ನು ಅವಮಾನಿಸುತ್ತಿರುವುದು ನಿಜಕ್ಕೂ ಸಹ ನೋವಿನ ಸಂಗತಿ ಎಂದು ಕಾಡುಗೊಲ್ಲ ಮುಖಂಡರಾದ ಗೋಪಿ ಯಾದವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಕಾಡು ಗೊಲ್ಲರನ್ನು ಕಡೆಗಣಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸಿ 15ರಿಂದ 18 ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಸಮುದಾಯ ಗೆಲ್ಲಿಸಿದೆ. ಆದರೆ ಅಧಿಕಾರ ದೊರಕಿದ ಬಳಿಕ ಬಿಜೆಪಿ ಸಮುದಾಯವನ್ನು ಕಡೆಗಣಿಸಿದೆ ಎಂದರು.
ಸರ್ಕಾರವು ಕಾಡುಗೊಲ್ಲರ ಅಭಿವೃದ್ಧಿ ನಿಗಮ ಘೋಷಿಸಿದೆಯಾದರೂ ಈವರೆಗೆ ಅದಕ್ಕೆ ಅಧ್ಯಕ್ಷರನ್ನೂ ನೇಮಕ ಮಾಡದೇ ಪದೇ ಪದೇ ಕುಂಟು ನೆಪ ಹೇಳುತ್ತಾ ಸಮುದಾಯವನ್ನು ಅವಮಾನಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಾಡುಗೊಲ್ಲರು 18 ಲಕ್ಷ ಜನಸಂಖ್ಯೆ ಇದ್ದರೂ, ಅವರ ಅಭಿವೃದ್ಧಿಗೆಂದು ಮೂರು ನಾಮ ಹಾಕಿದಂತೆ ಕೇವಲ 3 ಕೋಟಿ ಅನುದಾನ ನೀಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕಾಡುಗೊಲ್ಲ ರಿಗೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿ ಅನುಷ್ಠಾನಕ್ಕೆ ತರಲಾಗಿತ್ತು. ಆ ಸಂದರ್ಭದಲ್ಲಿ ಜಯಮ್ಮ ಬಾಲರಾಜ್ ಅವರನ್ನು ಎಂಎಲ್ಸಿ ಮಾಡಲಾಗಿತ್ತು ಎಂದು ಯಾದವ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರವಿದ್ದಾಗ ಸಮುದಾಯದ ನಾಯಕರನ್ನು ಗುರುತಿಸಿ ವಿವಿಧ ಹುದ್ದೆಗಳನ್ನು ನೀಡಲಾಗಿತ್ತು ಎಂದು ಸ್ಮರಿಸಿದ ಅವರು, ಬಿಜೆಪಿಯು ಕಾಡುಗೊಲ್ಲರಿಗೆ ನೀಡಿರುವ ಸವಲತ್ತುಗಳನ್ನೂ ಕಿತ್ತುಕೊಳ್ಳುತ್ತಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಮತ್ತು ಮುಖಂಡರು ಗೊಲ್ಲರಹಟ್ಟಿ ಗೆ ಬರದಂತೆ ತಡೆಯುವ ಸಂದರ್ಭ ಬಂದರೂ ಬರಬಹುದು ಎಂದು ಅವರು ಎಚ್ಚರಿಸಿದರು.
ಕೇವಲ ಒಬ್ಬ ಜನಪ್ರತಿನಿಧಿ ಮಾತು ಕೇಳಿ ಕಾಡು ಗೊಲ್ಲರನ್ನು ಎಸ್ ಟಿ ಪಟ್ಟಿಯಿಂದ ತಡೆ ಹಿಡಿದಿರುವುದು ದುರದೃಷ್ಟಕರ. ಬಿಜೆಪಿ ಸರ್ಕಾರವು ಕಾಡು ಗೊಲ್ಲರನ್ನು ಎಸ್ ಟಿಗೆ ಸೇರಿಸದಿದ್ದರೆ ಕಾಡುಗೊಲ್ಲರು ದೊಡ್ಡ ಆಂದೋಲನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವರದಿ: ಮುರುಳಿಧರನ್ ಆರ್, ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


