ಸಂಪಾಜೆ: ಪಯಶ್ವಿನಿ ನದಿಯಲ್ಲಿ ಸುಳ್ಯ ತಾಲೂಕಿನ ವಿವಿಧ ಭಾಗದಲ್ಲಿ ಡಿಡೀರ್ ಪ್ರವಾಹ ಉಂಟಾಗಿ ಉಕ್ಕಿ ಹರಿದು ಹಲವೆಡೆ ನೀರು ನುಗ್ಗಿ, ಬೃಹತ್ ಗಾತ್ರದ ಮರಗಳೂ ಕೊಚ್ಚಿ ಬಂದ ಘಟನೆ ಆ.29ರ ಬೆಳಿಗ್ಗಿನ ಜಾವ ಸಂಪಾಜೆ ಸುತ್ತಮುತ್ತ ನಡೆದಿದೆ.
ಪಯಸ್ವಿನಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ನೀರು ತುಂಬಿ ಹರಿದು ಹಲವು ಕಡೆಗಳಲ್ಲಿ ನದೀ ಬದಿಯ ಪ್ರದೇಶಗಳಿಗೆ ನೀರು ನುಗ್ಗಿದೆ. ಕೊಯನಾಡು ಶಾಲೆ ಬಳಿಯ 5 ಮನೆಗಳು ಜಲಾವೃತವಾಯಿತು. ಬಳಿಕ ಈ ಮನೆಯವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
ಭಾರೀ ಗಾತ್ರದ ಮರಗಳು ಪ್ರವಾಹ ನೀರಿನಲ್ಲಿ ಕೊಚ್ಚಿ ಬಂದು ಕೊಯನಾಡಿನ ಕಿಂಡಿ ಅಣೆಕಟ್ಟಿನಲ್ಲಿ ಅಡ್ಡಲಾಗಿ ನಿಂತಿದೆ. ಹಲವೆಡೆ ಕೃಷಿ, ತೋಟಗಳಿಗೆ ನೀರು ನುಗ್ಗಿದೆ. ಊರುಬೈಲು, ಚೆಂಬು ಭಾಗದಲ್ಲಿ ಸೇತುವೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಸಂಪಾಜೆ ಭಾಗದಲ್ಲಿ ಮಳೆ ಕಡಿಮೆ ಇದ್ದರೂ ಪ್ರವಾಹ ಬಂದು ನದಿ ಉಕ್ಕಿ ಹರಿದು ನೀರು ನುಗ್ಗಿದ ಕಾರಣ ಜನರಲ್ಲಿ ಆತಂಕ ಸೃಷ್ಠಿಯಾಯಿತು. ಕಲ್ಮಕಾರು , ಕೊಲ್ಲಮೊಗ್ರುನಲ್ಲೂ ಇಂತಹದೇ ಪರಿಸ್ಥಿತಿ ನಿರ್ಮಾಣವಾಗಿದೆ. ಬೃಹತ್ ಗಾತ್ರದ ಮರಗಳು ನೀರಿನೊಂದಿಗೆ ಕೊಚ್ಚಿ ಬಂದಿದೆ.
ಆದರೆ ರಾತ್ರಿ ಭಾಗಮಂಡಲ ಭಾಗದಲ್ಲಿ ಭಾರಿ ಮಳೆಯಾಗಿದೆ. ಭಾಗಮಂಡಲ ನಾಪೋಕ್ಲು ರಸ್ತೆ ಜಲಾವೃತವಾಗಿದೆ. ಸುಳ್ಯ ಸಂಪರ್ಕದ ಭಾಗಮಂಡಲ ಕರಿಕೆ ರಸ್ತೆಯಲ್ಲಿ ಬೃಹತ್ ಗುಡ್ಡ ಕುಸಿತವಾಗಿದೆ.ಪಯಸ್ವಿನಿ ನದೀ ಪಾತ್ರದ ಗೂನಡ್ಕ, ಪೇರಡ್ಕ ಭಾಗದಲ್ಲಿಯೂ ನೀರು ನುಗ್ಗಿದೆ. ಪಯಸ್ವಿನಿ ಉದ್ಭವ ಭಾಗದಲ್ಲಿ ಭಾರೀ ಮಳೆಯಾಗಿರುವ ಸಾಧ್ಯತೆ ಇದೆ.
ಕೊಯನಾಡು ಸೇತುವೆ ಬಳಿ ಸಿಲುಕಿಕೊಂಡ ನೂರಾರು ಮರ, ರೆಂಬೆ ಕೊಂಬೆಗಳು ಸಿಲುಕಿ ಕೊಂಡಿದೆ. ಈ ಮಳೆಗಾಲದಲ್ಲಿ ಇದು ನಾಲ್ಕನೇ ಬಾರಿ ಕೊಯನಾಡಿನಲ್ಲಿ ಅಪಾಯದ ಸ್ಥಿತಿ. ಸ್ಥಳೀಯರ ಮನೆಯೊಳಗೆ ಎಲ್ಲೆಲ್ಲೂ ನೀರು, ಕೆಸರು ತುಂಬಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy