ಬೆಂಗಳೂರು ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿಸಲು ಹಾಗೂ ಕನ್ನಡ ರಂಗಭೂಮಿಗೆ ರಂಗ ವೇದಿಕೆಗಳ ಕೊರತೆ ನೀಗಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಮೂಲಕ ಕಲಾವಿದರಿಗೆ ಬಿಬಿಎಂಪಿ ಸಿಹಿ ಸುದ್ದಿ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಡೆತನದಲ್ಲಿರುವ ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್‌ಹಾಲ್) ಬಾಡಿಗೆ ದರವನ್ನು ಪರಿಷ್ಕರಿಸಿದೆ. ದರ ಪರಿಷ್ಕರಣೆ ಮೂಲಕ ಹಾಲಿ ದರವನ್ನು ಕಡಿಮೆ ಮಾಡಿದೆ. ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ರಂಗಭೂಮಿ ಕಲಾವಿದರಿಗೆ ಕಡಿಮೆ ದರದಲ್ಲಿ ಸಿಗುವಂತೆ ದರ ಕಡಿತಗೊಳಿಸಿದೆ. ಈ ಪರಿಷ್ಕೃತ ದರ ಸೆಪ್ಟಂಬರ್ 1ರಿಂದ ಜಾರಿಗೆ ತರುವ ಮೂಲಕ ಕಲಾವಿದರಿಗೆ ಗೌರಿ ಗಣೇಶ ಹಬ್ಬದ ಕೊಡುಗೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್ ಪುರ ಅವರು, ಟೌನ್‌ಹಾಲ್ ಈ ಹಿಂದೆ ಪೂರ್ತಿ ದಿನ (ಬೆಳಗ್ಗೆ 8 ರಿಂದ ರಾತ್ರಿ 10. ಗಂಟೆವರೆಗೆ) ಎಸಿ ಸಹಿತ (ಹವಾ ನಿಯಂತ್ರಿತ) ಬಾಡಿಗೆ ಬೇಕಾದರೆ 75,000 ರೂ. ಹಾಗೂ ನಾನ್ ಎ.ಸಿ (ಎಸಿ ರಹಿತ) 60,000 ರೂ. ನೀಡಬೇಕಿತ್ತು. ಇದೀಗ ದರ ಪರಿಷ್ಕರಿಸಿದ್ದರಿಂದ ಪೂರ್ತಿ ಒಂದು ದಿನಕ್ಕೆ ಎಸಿ ಸಹಿತ 60,000 ರೂ.ಗೆ ಲಭ್ಯವಾಗಲಿದೆ. ಎಸಿ ರಹಿತ 50,000 ರೂ.ದರ ನಿಗದಿಪಡಿಸಲಾಗಿದೆ. ಇದಕ್ಕೆ ತೆರಿಗೆಗಳು ಪ್ರತ್ಯೇಕವಾಗಿವೆ ಸೇರ್ಪಡೆಗೊಳ್ಳಲಿವೆ ಎಂದು ಬಿಬಿಎಂಪಿ ಆದೇಶದಲ್ಲಿ ತಿಳಿಸಲಾಗಿದೆ ಎಂದರು.
ಅಲ್ಲದೆ ಟೌನ್‌ಹಾಲ್ ಮೊದಲಾರ್ಧ ದಿನ (ಬೆಳಗ್ಗೆ 8 ರಿಂದ ಮಧ್ಯಾಹ್ನ 3.00 ಗಂಟೆವರೆಗೆ) ಹಾಗೂ ದ್ವಿತಿಯಾರ್ಧ ದಿನ (ಮಧ್ಯಾಹ್ನ 3 ರಿಂದ ರಾತ್ರಿ 10 ಗಂಟೆವರೆಗೆ) ಬಾಡಿಗೆಗೆ ಎಸಿ ಸಹಿತ 30,000 ಹಾಗೂ ಎಸಿ ರಹಿತ 25,000 ರೂ. ದರ ನಿಗದಿಪಡಿಸಿದ್ದು, ತೆರಿಗೆಗಳು ಪ್ರತ್ಯೇಕವಾಗಿರುತ್ತದೆ. ದರ ಪರಿಷ್ಕರಣೆಗೂ ಮುನ್ನ ಟೌನ್‌ಹಾಲ್ ಅನ್ನು ಮೊದಲಾರ್ಧ ದಿನ ಮತ್ತು ದಿತಿಯಾರ್ಧ ದಿನಕ್ಕೆ ಬಾಡಿಗೆ ನೀಡುತ್ತಿರಲಿಲ್ಲ.
ಕಲಾವಿದರಿಗೆ ಶೇ.50ರಷ್ಟು ರಿಯಾಯಿತಿ ಇನ್ನು ಮುಖ್ಯವಾಗಿ ಕನ್ನಡ ರಂಗಭೂಮಿಯ ಎಲ್ಲಾ ನಾಟಕಗಳ ಪ್ರಸಂಗಗಳಿಗೆ ಹಾಗೂ ವಿಶೇಷ ಅನುಮತಿ ಪಡೆದ ಕಾರ್ಯಕ್ರಮಗಳಿಗೆ ಪರಿಷ್ಕೃತ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗುವುದು. ಅಂದರೆ ಒಟ್ಟು ಬಾಡಿಗೆ ಮೇಲೆ ಅರ್ಧದಷ್ಟು ಮಾತ್ರವೇ ಕಲಾವಿದರು, ಆಯೋಜಕರು ಅಥವಾ ಸಂಬಂಧಿಸಿದವರು ಪಾವತಿಸಬೇಕು ಎಂದು ನಿಯಮ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
ಕನ್ನಡದ ರಂಗಭೂಮಿ ಕಲಾವಿದರಿಗೆ ಬಿಬಿಎಂಪಿ ವತಿಯಿಂದ ಗೌರಿ-ಗಣೇಶ ಹಬ್ಬದ ಉಡುಗೊರೆ ಲಭ್ಯವಾಗಿದೆ. ಬೆಂಗಳೂರಿನ ಸಾಂಸ್ಕೃತಿಕ ಹಾಗೂ ರಂಗಭೂಮಿ ಸಂಘಟನೆಗಳು ಕಡಿಮೆ ಬೆಲೆಗೆ ಲಭ್ಯವಾಗು ಟೌನ್‌ಹಾಲ್‌ನ ಈ ಬಾಡಿಗೆ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಬೇಕು ಎಂದು ವಿಶೇಷ ಆಯುಕ್ತರು ಮನವಿ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy