ಗದಗ, ಸೆಪ್ಟೆಂಬರ್, 06: ಗದಗ ಜಿಲ್ಲೆಯಲ್ಲಿ ಮಳೆರಾಯ ಆರ್ಭಟಿಸಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ವರುಣನ ಅಬ್ಬರಕ್ಕೆ ಜಿಲ್ಲೆಯ ಮಜ್ಜೂರಿನಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಪರಿಣಾಮ ಜನರು ಗುಡ್ಡದಲ್ಲಿ ವಾಸ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಶಿರಹಟ್ಟಿ ತಾಲೂಕಿನ ಮಜ್ಜೂರು ಗ್ರಾಮದ ಮಕ್ಕಳು, ವೃದ್ಧರು, ಮಹಿಳೆಯರು ಗುಡ್ಡದಲ್ಲಿ ವಾಸ ಮಾಡುತ್ತಿದ್ದಾರೆ.
ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಬೇರೆ ಯಾವುದೇ ದಾರಿಯಿಲ್ಲದೇ ಜನರು ಮಕ್ಕಳ್ಳನ್ನು ಕರೆದುಕೊಂಡು ಗುಡ್ಡದಲ್ಲಿ ವಾಸ ಮಾಡಲು ಹೋಗಿದ್ದಾರೆ. ಅಲ್ಲದೇ ರಾತ್ರಿಯಿಡಿ ತತ್ತು ಅನ್ನ ಇಲ್ಲದೇ ಪರದಾಡಿದ್ದಾರೆ. ಆದರೂ ಕೂಡ ನೆರವಿಗೆ ಸ್ಥಳೀಯ ಅಧಿಕಾರಿಗಳು ಇತ್ತ ತಲೆ ಹಾಕುತ್ತಿಲ್ಲ ಎಂದು ಜನರು ಆಕ್ರೋಶ ಹೊರಹಾಕಿದರು.
ಇನ್ನು ಮುಂಡರಗಿ ತಾಲೂಕಿನ ಡಂಬಳ ಗ್ರಾಮಕ್ಕೂ ಕೆರೆ ನೀರು ನುಗ್ಗಿದ ಪರಿಣಾಮ ಕೆವಿಜಿ ಬ್ಯಾಂಕ್, ಬಿಸಿಎಂ ಹಾಸ್ಟಲ್ ಜಲಾವೃತಗೊಂಡಿವೆ. ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮಕ್ಕೆ ಬೆಣ್ಣೆ ಹಳ್ಳದ ನೀರು ನುಗ್ಗಿ ಬಹುತೇಕ ಮನೆಗಳು ಜಲಾವೃತವಾಗಿವೆ. ಮನೆಯಲ್ಲಿದ್ದ ಧಾನ್ಯಗಳು, ಗೃಹೋಪಯೋಗಿ ವಸ್ತುಗಳು ಸಂಪರ್ಣ ಹಾನಿಯಾಗಿವೆ. ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿರುವ ಬೆಣ್ಣೆ ಹಳ್ಳ ರೈತರು ಬೆಳೆದ ಬೆಳೆಗಳಿಗೆ ಹಾನಿ ಮಾಡಿದೆ.
ಕುರ್ಲಗೇರಿ ಗ್ರಾಮದ ಸೇತುವೆ ಜಲಾವೃತ
ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದ್ದು ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ಸೇತುವೆ ಜಲಾವೃತ ಆಗಿದೆ. ಪರಿಣಾಮ ನರಗುಂದ – ಗದಗ ಸಂಚಾರ ಸ್ಥಗಿತಗೊಂಡಿದೆ. ಮತ್ತೊಂದೆಡೆ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿಯ ಸೇತುವೆ ಮುಳುಗಡೆಯಾಗಿ, ರೋಣ – ನರಗುಂದ ಸಂಪರ್ಕ ಕಡಿತಗೊಂಡಿದೆ.
ಮನೆ ಗೋಡೆ ಕುಸಿತ, ವ್ಯಕ್ತಿ ಸಾವು
ಹಾವೇರಿ ಜಿಲ್ಲೆಯಲ್ಲಿಯೂ ಭಾರೀ ಮಳೆ ಸುರಿದ ಪರಿಣಾಮ, ಶಿಶುವಿನಹಾಳ ಗ್ರಾಮದಲ್ಲಿ ಮನೆ ಕುಸಿದು 32 ವರ್ಷದ ಬಸವನಗೌಡ ಎಂಬುವವರು ಸಾವನ್ನಪ್ಪಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮೃತ ಬಸನಗೌಡ ತಂದೆ ಶಿವನಗೌಡ ಹಾಗೂ ತಾಯಿ ಕಾಶೆವ್ವ ಅವರನ್ನು ರಕ್ಷಣೆ ಮಾಡಿದ್ದಾರೆ. ಮಲಗಿದ್ದ ಸಂದರ್ಭದಲ್ಲಿ ಬಸನಗೌಡ ಅವರ ಮೇಲೆ ಮನೆ ಗೋಡೆ ಬಿದ್ದ ಪರಿಣಾಮ ಅವರು ತೀವ್ರ ಗಾಯಗೊಂಡಿದ್ದರು. ಈ ವೇಳೆ ಸ್ಥಳೀಯರು ಬಸನಗೌಡ ಅವರನ್ನು ಶಿಗ್ಗಾವಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸಗೆಂದು ಹುಬ್ಬಳ್ಳಿಯ ಕಿಮ್ಸ್‌ಗೆ ಕರೆದೊಯ್ಯುವ ಸಂದರ್ಭದಲ್ಲಿ ಬಸನಗೌಡ ಮೃತ ಪಟ್ಟಿದ್ದಾರೆ.
ಜಿಲ್ಲೆಯ ಸವಣೂರು ತಾಲೂಕಿನ ಸಿದ್ದಾಪುರ ಗ್ರಾಮದ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡಿದ್ದಾರೆ. ಸುಮಾರು ವರ್ಷಗಳ ಬಳಿಕ ಸಿದ್ದಾಪುರದ ಈಶ್ವರ ಕೆರೆ ತುಂಬಿ ಹರಿಯುತ್ತಿದೆ. 404 ಎಕರೆ ವಿಸ್ತೀರ್ಣದಲ್ಲಿರುವ ಕೆರೆ ತುಂಬಿದ್ದು, ಹೆಚ್ಚವರಿ ನೀರು ಗ್ರಾಮಕ್ಕೂ ನುಗ್ಗಿದೆ. 40 ವರ್ಷಗಳ ಬಳಿಕ ಕೆರೆ ಕೊಡಿ ಬಿದ್ದಿರುವ ಹಿನ್ನೆಲೆ ಗ್ರಾಮಸ್ಥರು ಹೈರಾಣಾಗಿದ್ದಾರೆ.
ಈಶ್ವರ ದೇವಸ್ಥಾನ ಜಲಾವೃತ
ಇನ್ನು ಕೊಪ್ಪಳದಲ್ಲಿಯೂ ಸುರಿದ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಮನೆಗಳು ಕುಸಿಯುತ್ತಲೇ ಇದ್ದು, ಅಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕುಕನೂರು ತಾಲೂಕಿನ ವೀರಾಪುರ ಗ್ರಾಮದಲ್ಲಿರುವ ಈಶ್ವರ ದೇವಸ್ಥಾನವೂ ಕೂಡ ಸಂಪೂರ್ಣ ಜಲಾವೃತವಾಗಿದೆ. ದೇವಸ್ಥಾನದ ಸುತ್ತಲೂ ಹಳ್ಳದ ನೀರು ತುಂಬಿದ್ದು, ಸುತ್ತಮುತ್ತಲಿನ ಜನರು ತತ್ತರಿಸಿ ಹೋಗಿದ್ದಾರೆ.
55 ವರ್ಷದ ನಾಗಮ್ಮ ಶವವಾಗಿ ಪತ್ತೆ
ಗದಗ ತಾಲೂಕಿನ ನಾಗಾವಿ ಗ್ರಾಮದ ಬಳಿ ಧಾರಾಕಾರ ಮಳೆಗೆ ರಸ್ತೆ ಕುಸಿದಿದೆ. ಸುಮಾರು 60-70 ಅಡಿ ಯಷ್ಟು ರಸ್ತೆ ಕುಸಿದಿದ್ದು, ದೊಡ್ಡ ಕಂದಕದ ಉಂಟಾಗಿದೆ. ಆದ್ದರಿಂದ ನಾಗಾವಿ ಗ್ರಾಮದಿಂದ ಮಲಿಂಗಾಪುರ, ಕಬಲಾಯದಕಟ್ಟೆ, ಬೆಳದಡಿ ತಾಂಡ, ಹತ್ತಿಕಟ್ಟಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ದೇವರಹಳ್ಳದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಮಹಿಳೆ ಶವವಾಗಿ ಪತ್ತೆ ಆಗಿದ್ದಾಳೆ. ಇದೀಗ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ವ್ಯಾಪ್ತಿಯ ಹಳ್ಳದಲ್ಲಿ ಮಹಿಳೆ ಶವ ಪತ್ತೆ ಆಗಿದೆ. ಮೃತ ಮಹಿಳೆಯನ್ನು 55 ವರ್ಷದ ನಾಗಮ್ಮ ಎಂದು ಗುರುತಿಸಲಾಗಿದೆ. ಜಮೀನು ಕೆಲಸಕ್ಕೆ ಹೋಗಿ ಬರುವಾಗ ಹಳ್ಳದ ರಭಸಕ್ಕೆ ನಾಗಮ್ಮನವರು ಕೊಚ್ಚಿಕೊಂಡು ಹೋಗಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy