ಭುವನೇಶ್ವರ್ ಸೆಪ್ಟೆಂಬರ್ 7: ಒಡಿಶಾದಲ್ಲಿ ಪ್ರವಾಹದ ನೀರು ಇಳಿಮುಖವಾಗಿದ್ದು, ವಿಷಕಾರಿ ಇರುವೆಗಳಿಂದಾಗಿ ಗ್ರಾಮವೊಂದು ಭಯಭೀತಗೊಂಡಿದೆ. ಇರುವೆಗಳಿಂದಾಗಿ ಜನರು ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಾಲಿಟ್ಟಲೆಲ್ಲ ಇರುವೆಗಳದ್ದೇ ಕಾರುಬಾರು ಚಾಲ್ತಿಯಲ್ಲಿದೆ. ಇದರಿಂದಾಗಿ ಬೇಸತ್ತ ಅನೇಕ ಜನರು ಗ್ರಾಮವನ್ನು ತೊರೆದಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಜಿಲ್ಲಾಡಳಿತಕ್ಕೆ ಸಹಾಯ ಮಾಡಲು ವಿಜ್ಞಾನಿಗಳ ತಂಡವನ್ನು ಕಳುಹಿಸಿದೆ. ಅವರು ಈ ಭೀಕರ ಬಿಕ್ಕಟ್ಟಿನಿಂದ ಹೊರಬರಲು ಮಾರ್ಗವನ್ನು ಸೂಚಿಸಿದ್ದಾರೆ. ಈ ಇರುವೆಗಳ ದಾಳಿಯಿಂದ ಪಾರಾಗಲು ರಾಣಿ ಇರುವೆಗಳನ್ನು ಕಂಡುಹಿಡಿಯುವುದು ಒಂದೇ ಮಾರ್ಗವಾಗಿದೆ, ಇಲ್ಲದಿದ್ದರೆ ಈ ಬಿಕ್ಕಟ್ಟನ್ನು ಕೊನೆಗೊಳಿಸುವುದು ಕಷ್ಟ ಎಂದು ವಿಜ್ಞಾನಿಗಳು ಹೇಳುತ್ತಾರೆ.
ವಿಷಪೂರಿತ ಇರುವೆಗಳು ಇಡೀ ಗ್ರಾಮವನ್ನು ವಶಪಡಿಸಿಕೊಂಡಿವೆ. ಹೀಗಾಗಿ ಒಡಿಶಾದ ಪುರಿ ಜಿಲ್ಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಮುಖ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ವಾಸ್ತವವಾಗಿ, ವಿಷಕಾರಿ ಇರುವೆಗಳು ಇಡೀ ಹಳ್ಳಿಯ ಮೇಲೆ ದಾಳಿ ಮಾಡಿದೆ. ಮಂಗಳವಾರ, ಅನೇಕ ಜನರು ಗ್ರಾಮವನ್ನು ತೊರೆದು ಓಡಿಹೋಗುವಂತೆ ಒತ್ತಾಯಿಸಲಾಗಿದೆ ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರದೇವಪುರ ಪಂಚಾಯಿತಿಯ ಬ್ರಾಹ್ಮಣಸಾಹಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದಿಂದ ಪ್ರವಾಹದ ನೀರು ಕಡಿಮೆಯಾಗುತ್ತಿದ್ದಂತೆ ಲಕ್ಷಗಟ್ಟಲೆ ವಿಷಪೂರಿತ ಕೆಂಪು ಮತ್ತು ಬೆಂಕಿ ಇರುವೆಗಳು ಕಾಣಿಸಿಕೊಂಡಿವೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಗ್ರಾಮಸ್ಥರನ್ನು ಅಪಾಯಕಾರಿ ಇರುವೆಗಳಿಂದ ಮುಕ್ತಗೊಳಿಸಲು ಜಿಲ್ಲಾಡಳಿತ ಮತ್ತು ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಗ್ಗ ಹಾಕಿ ಪ್ರದೇಶವನ್ನು ಪ್ರವೇಶದಂತೆ ಸೂಚಿಸಿದ್ದಾರೆ.
ಸದ್ಯ ಬ್ರಾಹ್ಮಣ ಸಹಿ ಗ್ರಾಮದಲ್ಲಿ ಇರುವೆಗಳ ಕಾಟ ಹೆಚ್ಚಾಗಿದೆ. ಮನೆ, ರಸ್ತೆ, ಹೊಲ, ಮರಗಳಿಂದಲೂ ಇರುವೆಗಳು ಗೋಚರಿಸುತ್ತವೆ. ಇರುವೆಗಳ ಕಾಟದಿಂದ ಜನ ಜೀವನ ದುಸ್ತರವಾಗಿದೆ. ಅನೇಕ ಜನರು ಇರುವೆಗಳಿಂದ ಕಚ್ಚಲ್ಪಟ್ಟಿದ್ದಾರೆ. ನಂತರ ಅವರ ದೇಹದ ಭಾಗವು ಊದಿಕೊಂಡಿದೆ ಮತ್ತು ಅವರು ಚರ್ಮದ ಮೇಲೆ ತೀವ್ರವಾದ ಕಿರಿಕಿರಿಯನ್ನು ದೂರುತ್ತಿದ್ದಾರೆ. ಇರುವೆಗಳ ಹಾವಳಿ ಎಷ್ಟಿದೆಯೆಂದರೆ ಮನೆಯಲ್ಲಿ ಕಾಣಸಿಗುವ ದನ, ಹಲ್ಲಿಗಳ ಪ್ರಾಣ ತೆಗೆದುಕೊಂಡಿವೆ. ಕುಳಿತಾಗಲೀ, ನಿಂತಾಗಲೀ, ಮಲಗಿದ್ದಾಗಲೀ ಕೀಟನಾಶಕ ಪುಡಿಯ ವೃತ್ತಾಕಾರದ ನಡುವೆಯೇ ನಿಂತುಕೊಳ್ಳಬೇಕು ಮತ್ತು ಮಲಗಬೇಕು. ಕೀಟನಾಶಕವಿಲ್ಲದೆ ಜನಜೀವನ ಕಷ್ಟವಾಗಿದೆ.
ಗ್ರಾಮವನ್ನು ತೊರೆದ ಅನೇಕ ಕುಟುಂಬಗಳು
ಇರುವೆಗಳ ಭೀತಿಯಿಂದ ಈವರೆಗೆ ಗ್ರಾಮದ ಕನಿಷ್ಠ ಮೂರು ಕುಟುಂಬಗಳು ಮನೆ ಬಿಟ್ಟು ಓಡಿಹೋಗಿ ಸಂಬಂಧಿಕರೊಂದಿಗೆ ವಾಸ ಮಾಡುವಂತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಲೋಕನಾಥ್ ದಾಸ್ ಎಂಬ ಗ್ರಾಮದವರು ತಮ್ಮ ಜೀವನದಲ್ಲಿ ಹಿಂದೆಂದೂ ಇಂತಹ ಘಟನೆಯನ್ನು ನೋಡಿರಲಿಲ್ಲ, ಆದರೆ ಈ ಹಿಂದೆ ಪ್ರವಾಹ ಬಂದಿತ್ತು. ಇದರಿಂದ ಇರುವೆಗಳು ಹೆಚ್ಚಾಗಿವೆ ಎಂದಿದ್ದಾರೆ. ಪ್ರಸ್ತುತ ಸಮೀಪದ ಹಳ್ಳಿಯಲ್ಲಿ ಕುಟುಂಬದೊಂದಿಗೆ ಸಂಬಂಧಿಕರೊಂದಿಗೆ ವಾಸಿಸುತ್ತಿರುವ ರೇಣುಬಾಲಾ ದಾಸ್, “ಇರುವೆಗಳು ನಮ್ಮ ಜೀವನವನ್ನು ದುಸ್ತರಗೊಳಿಸಿವೆ. ನಮಗೆ ಸರಿಯಾಗಿ ತಿನ್ನಲು, ಮಲಗಲು ಅಥವಾ ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇರುವೆಗಳ ಭಯದಿಂದ ಮಕ್ಕಳು ಓದಲೂ ಸಾಧ್ಯವಾಗುತ್ತಿಲ್ಲ” ಎಂದು ದೂರಿದ್ದಾರೆ.
100 ಕುಟುಂಬಗಳು ವಾಸಿಸುವ ಗ್ರಾಮ
ಒಡಿಶಾದ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಸಂಜಯ್ ಮೊಹಂತಿ, ಈ ಗ್ರಾಮವು ನದಿ ಮತ್ತು ಪೊದೆ ಕಾಡುಗಳಿಂದ ಸುತ್ತುವರಿದಿದೆ ಎಂದು ಹೇಳುತ್ತಾರೆ. ಅವರ ಪ್ರಕಾರ, ‘ನದಿ ದಡಗಳು ಮತ್ತು ಪೊದೆಗಳಲ್ಲಿ ವಾಸಿಸುವ ಇರುವೆಗಳು ತಮ್ಮ ವಾಸಸ್ಥಳಗಳು ನೀರಿನಿಂದ ಜಲಾವೃತಗೊಂಡಿದ್ದರಿಂದ ಹಳ್ಳಿಗೆ ವಲಸೆ ಬಂದವು’. ಸುಮಾರು 100 ಕುಟುಂಬಗಳು ವಾಸಿಸುವ ಗ್ರಾಮದಲ್ಲಿ ಇದೊಂದು ಹೊಸ ವಿದ್ಯಮಾನವಾಗಿದೆ. ಆದರೂ ಇರುವೆಗಳು ಎಲ್ಲಿಂದ ಬರುತ್ತಿವೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ. ಸ್ಥಳವನ್ನು ಗುರುತಿಸಿದ ನಂತರ, ಕೀಟನಾಶಕವನ್ನು ಎರಡು ಮೀಟರ್ ವ್ಯಾಪ್ತಿಯೊಳಗೆ ಸಿಂಪಡಿಸಬಹುದು ಎಂದಿದ್ದಾರೆ.
ಗ್ರಾಮಕ್ಕೆ ದಾವಿಸಿದ ವೈದ್ಯರ ತಂಡ
ಬಿಡಿಒ ರಶ್ಮಿತಾ ನಾಥ್ ಪ್ರಕಾರ, ಅಂತಹ ಇರುವೆಗಳು ಈ ಪ್ರದೇಶಕ್ಕೆ ಹೊಸದಲ್ಲ, ಆದರೆ ಅವು ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದು ಯಾರೂ ಭಾವಿಸಿರಲಿಲ್ಲ. ಇರುವೆ ಕಡಿತದಿಂದ ಊತ ಮತ್ತು ಚರ್ಮ ಕೆರಳಿಕೆಯಾಗಿದೆ ಎಂದು ಜನರು ದೂರುತ್ತಿದ್ದರೂ, ಇದರಿಂದ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ನಾನು ಹಳ್ಳಿಗೆ ಹೋಗಿ ನೋಡಿದಾಗ ಎಲ್ಲೆಲ್ಲೂ ಇರುವೆಗಳು. ಸ್ಥಳೀಯ ಜನರು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು, ಆದರೆ ಇರುವೆಗಳನ್ನು ಓಡಿಸಲು ಸಾಧ್ಯವಾಗಲಿಲ್ಲ. ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಕೀಟನಾಶಕ ಸಿಂಪಡಣೆಗೆ ಆದೇಶಿಸಲಾಗಿದೆ ಎನ್ನುತ್ತಾರೆ ಅವರು. ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ತಂಡಗಳು ಗ್ರಾಮಕ್ಕೆ ಆಗಮಿಸುತ್ತಿವೆ ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy