ಕರ್ನಾಟಕದ ಅಭಿವೃದ್ಧಿ ಎರಡು ಭಾಗಗಳಾಗಿ ವಿಂಗಡಣೆಗೊಂಡಿದೆ ಮತ್ತು ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಯ ಪಾಲು ದೊರಕದೇ ತಾರತಮ್ಯ ನಡೀತಾನೆ ಇದೆ. ಅದಕ್ಕೆ ನಾನು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಎಂದು ಅನಿಸುತ್ತದೆ.
ಈ ಮಾತನ್ನು ಕೇಳಿದ ತಕ್ಷಣ ಕರ್ನಾಟಕದಲ್ಲಿ ರಾಜಕೀಯ ಮತ್ತು ಪ್ರತ್ಯೇಕದ ಸಂಚಲನ ಮೂಡಿಸಿತು. ಇದು ಮಾತನ್ನು ಆಡಿದವರು ಬೇರೆ ಯಾರು ಅಲ್ಲ ಎಂಟು ಬಾರಿ ಶಾಸಕರಾದ ನಾಲ್ಕು ಬಾರಿ ಸಚಿವರಾದ ಉಮೇಶ್ ಕತ್ತಿ.
ಬುದ್ಧಿಜೀವಿಗಳು, ಕನ್ನಡ ಪರ ಸಂಘಟನೆಗಳು ಇವರು ವಿರುದ್ಧ ಸಿಡಿದೆದ್ದು ನಿಂತವು, ಆದರೆ ತಮ್ಮ ನಿಲುವನ್ನು ಬದಲಾಯಿಸದೆ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ನಾನು ಯಾವುದೇ ತ್ಯಾಗ ಮತ್ತು ಬಲಿದಾನಕ್ಕೆ ಸಿದ್ಧನಿದ್ದೇನೆ ಎಂದು ದಿಟ್ಟ ಮತ್ತು ನೇರ ಉತ್ತರ ಕೊಟ್ಟವರು ಇದೇ ಉಮೇಶ್ ಕತ್ತಿ.
ಉಮೇಶ್ ಕತ್ತಿ ಅಭಿವೃದ್ಧಿ ಕೆಲಸದಿಂದಾಗಿ ಜನರ ವಿಶ್ವಾಸ ಮತ್ತು ಪ್ರೀತಿಗಳಿಸಿದ್ದ ತಮ್ಮ ಕ್ಷೇತ್ರದಲ್ಲಿ ಸಾಹುಕಾರ ಎಂದೇ ಜನರ ಮನಸ್ಸಿನಲ್ಲಿ ವಾಸವಾಗಿದ್ದರು.
1985ರಲ್ಲಿ ಉಮೇಶ್ ಕತ್ತಿ ಅವರ ತಂದೆ ವಿಶ್ವನಾಥ್ ಕತ್ತಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಹುಕ್ಕೇರಿ ಕ್ಷೇತ್ರಕ್ಕೆ 25ನೇ ವಯಸ್ಸಿಗೆ ಉಮೇಶ್ ಕತ್ತಿ ಶಾಸಕರಾಗಿ ಆಯ್ಕೆಯಾಗುತ್ತಾರೆ.
ತನ್ನ ರಾಜಕೀಯ ಜೀವನದಲ್ಲಿ ಹಿಂದೆ ಸರಿದ ಮಾತೇ ಇಲ್ಲ. ಉಮೇಶ್ ಕತ್ತಿ ಅವರ ಅದೃಷ್ಟವೋ ಅಥವಾ ಅವರಗಾಗಿ ರಾಜಕೀಯ ಭಗವಂತ ಭವಿಷ್ಯ ನಿರೂಪಿಸಿದ ಎನ್ನಬಹುದು. ಅವರಿಗೆ ರಾಜ್ಯದ ಧೀಮಂತ ನಾಯಕರಗಳ ಜೊತೆ ಒಡನಾಟ ಬೆಳೆಯುತ್ತದೆ.
ರಾಜಕೀಯ ಮುತ್ಸದ್ದಿ ದಿವಂಗತ ರಾಮಕೃಷ್ಣ ಹೆಗಡೆ ಹೆಚ್. ಡಿ ದೇವೇಗೌಡ ,ಜೆ.ಎಚ್ .ಪಟೇಲ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿ ಸಚಿವರಾಗಿ ಒಳ್ಳೆಯ ಆಡಳಿತಕ್ಕೆ ಸೈ ಎನ್ನಿಸಿಕೊಂಡರು. ಆರು ಬಾರಿ ಪಕ್ಷಾಂತರ ಮಾಡಿ ರಾಜಕೀಯ ವಿಶ್ಲೇಷಕರಿಗೆ ವಿಶ್ಲೇಷಣೆ ಮಾಡಲು ಅವಕಾಶ ನೀಡದ ನಾಯಕರಾಗಿ ಉಮೇಶ್ ಕತ್ತಿ ಉಳಿದು ಬಿಟ್ಟರು.
ಜನತಾ ಪಕ್ಷ, ಜಾತ್ಯಾತೀತ ಜನತಾದಳ, ಕರ್ನಾಟಕ ಕಾಂಗ್ರೆಸ್ ಪಕ್ಷ , ಕೊನೆಯದಾಗಿ ಆಪರೇಷನ್ ಕಮಲದಿಂದಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾದರು. 9 ಬಾರಿ ಸ್ಪರ್ಧಿಸಿ, ಒಂದು ಬಾರಿ ಸೋತು, ಎಂಟು ಬಾರಿ ಶಾಸಕರಾಗಿ ಅಜೇಯರಾಗಿ ಉಳಿದರು. ಅಜೇಯರಾಗಿಯೇ ಮಡಿದರು. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಕೃಷಿ ಸಚಿವರಾಗಿ ಪ್ರಥಮ ಬಾರಿಗೆ ಕೃಷಿ ಬಜೆಟ್ ಅನ್ನು ಮಂಡಿಸುತ್ತಾರೆ. ಸುದೀರ್ಘ ಆಡಳಿತ ಅನುಭವಿ ರಾಜಕಾರಣಿಯಾಗಿದ್ದರು. ಹಾಗೆ ರಾಜ್ಯದ ಪ್ರಮುಖ ಖಾತೆಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರು.
ಸದ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅನ್ನಭಾಗ್ಯ ಯೋಜನೆಯ ಕುರಿತು ನೇರವಾಗಿ ಹೇಳಿಕೆಗಳನ್ನು ನೀಡುತ್ತಿದ್ದರು. ತನ್ನದೇ ಇಲಾಖೆಯ ಕೊರತೆಗಳನ್ನು ಮುಜುಗರ ಇಲ್ಲದೆ ಮಾತಾಡುತ್ತಿದ್ದರು. ಅದು ಪಡಿತರ ಚೀಟಿ ಆಗಿರಬಹುದು, ಅಕ್ಕಿ ವಿತರಣೆ ಅಂತಹ ಪ್ರಮುಖದ ವಿಷಯದ ಕುರಿತು ತನ್ನದೇ ಆದ ಅಭಿಪ್ರಾಯಗಳನ್ನು ಯಾವುದೇ ಮುಜುಗರ ಇಲ್ಲದೆ ವ್ಯಕ್ತಪಡಿಸುತ್ತಿದ್ದರು.
ತನ್ನ ಹಾಸ್ಯಪ್ರಜ್ಞೆ ಮತ್ತು ನೇರ ಮಾತುಗಾರಿಕೆ ಇವೆಲ್ಲವೂ ಉಮೇಶ್ ಕತ್ತಿಯವರ ವ್ಯಕ್ತಿತ್ವಕ್ಕೆ ಮೆರಗು ನೀಡುತ್ತಿದ್ದವು. ಸದ್ಯ ಉಮೇಶ್ ಕತ್ತಿ ಎಂಬ ಅಭಿವೃದ್ಧಿಯ ಹೊಸತನದ ಚಿಂತನೆಯುಳ್ಳ ನಾಯಕ ನಮ್ಮೆಲ್ಲರನ್ನ ಅಗಲಿದ್ದಾರೆ. ಕರ್ನಾಟಕದ ಅಭಿವೃದ್ಧಿ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಅವರು ಕಂಡ ಕನಸುಗಳು ನನಸಾದಾಗ ಮಾತ್ರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


