ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸುವರ್ಣಮುಖಿ ನದಿಗೆ ನಿರ್ಮಿಸಿದ ಸೇತುವೆ ಕಳೆದ ರಾತ್ರಿ ಕುಸಿದಿದೆ. ಪರಿಣಾಮವಾಗಿ ಮ್ಯಾದನಹೊಳೆ – ಸಮುದ್ರದಹಳ್ಳಿ ನಡುವಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ಸುವರ್ಣಮುಖಿ ನದಿಗೆ 1979-80ರಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು. 60 ಮೀಟರ್ ಉದ್ದದ ಸೇತುವೆ ಕುಸಿದ ಪರಿಣಾಮ ಕೋಡಿಹಳ್ಳಿ, ಇಕ್ಕನೂರು ಕುರುಬರಹಳ್ಳಿ ಭಾಗದ ಜನರು ಸಮುದ್ರದಹಳ್ಳಿ ಸಂಪರ್ಕಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆರನಕಟ್ಟೆ ಪ್ರೌಢಶಾಲೆ ಮತ್ತು ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಸಾಧ್ಯವಾಗದೇ ಮನೆಯಲ್ಲಿಯೇ ಉಳಿದುಕೊಳ್ಳುವಂತಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸುವರ್ಣಮುಖಿ ನದಿ ಮೈದುಂಬಿ ಹರಿದಿತ್ತು. ಸೇತುವೆ ಮುಳುಗುವಷ್ಟು ನೀರು ಹರಿದಿದ್ದು, ಕೆಲ ದಿನಗಳ ಹಿಂದೆಯಷ್ಟೇ ಪ್ರವಾಹ ಇಳಿದಿತ್ತು. ನದಿಯಲ್ಲಿ ಈಗ ಅಲ್ಪ ಪ್ರಮಾಣದ ನೀರು ಹರಿಯುತ್ತಿದೆ. ನೀರಿನ ರಭಸಕ್ಕೆ ಶಿಥಿಲಗೊಂಡಿದ್ದ ಸೇತುವೆ ಕುಸಿದು ಬಿದ್ದಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿರಿಯೂರು ತಾಲ್ಲೂಕಿನ ತಾಲ್ಲೂಕು ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಸಂಪರ್ಕ ಸೇತುವೆ ರಾತ್ರಿ ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸೇತುವೆ ದುರಸ್ತಿ ಕ್ರಮಕ್ಕೆ ಕೈಗೊಳ್ಳಲಾಗಿದ್ದು, ಇದಕ್ಕೆ ಕಾಲಾವಕಾಶ ಹಿಡಿಯಲಿದ್ದು, ಪರ್ಯಾಯ ಮಾರ್ಗ ಪರಿಶೀಲಿಸಲಾಗುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ, ಸೇತುವೆ ಬಳಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪ್ರಶಾಂತ ಕೆ ಪಾಟೀಲ ತಿಳಿಸಿದರು.
ಇನ್ನೂ ಹಿರಿಯೂರು ತಾಲೂಕಿನ ಹುಳಿಯಾರ್ ರಸ್ತೆಯಿಂದ ಟಿ.ಬಿ.ಸರ್ಕಲ್ ಗೆ ಹಾದು ಹೋಗುವ ಪ್ರಮುಖ ರಸ್ತೆಯಲ್ಲಿರುವ ವೇದಾವತಿ ಸೇತುವೆಯು ಅಪಾಯದ ಅಂಚಿನಲ್ಲಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು ಎಂದು ಹಿರಿಯೂರು ತಾಲ್ಲೂಕಿನ ಸಾರ್ವಜನಿಕರು ಮನವಿ ಮಾಡಿದ್ದಾರೆ.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy