ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಸೋಮನಹಳ್ಳಿ ತಾಂಡದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ರಕ್ಷಿತಾಳ ಅಂಗಾಗಗಳನ್ನು ದಾನ ಮಾಡುವ ಮೂಲಕ ಆಕೆಯ ಕುಟುಂಬದವರು ಸಾರ್ಥಕತೆ ಮೆರೆದಿದ್ದಾರೆ. ರಕ್ಷಿತಾಳ ಅಂಗಾಂಗಳನ್ನು ಹೊತ್ತ ಆಂಬುಲೆನ್ಸ್ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಿಂದ ಮಂಗಳೂರಿನ ಕಡೆಗೆ ತಲುಪಿದೆ.
ಚಿಕ್ಕಮಗಳೂರು, ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಉಜಿರೆ, ಬೆಳ್ತಂಗಡಿ, ಮಂಗಳೂರು ಮೂಲಕ ಝೀರೋ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್‌ನಲ್ಲಿ ಅಂಗಾಂಗಗಳ ಸಾಗಾಟ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಮನವಿ ಮಾಡಿದ್ದು, ಇದೀಗ ಕಡೂರಿನತ್ತ ಪಾರ್ಥಿವ ಶರೀರ ತಲುಪಿದೆ.
ವಿಶೇಷ ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರಿನಿಂದ ಬೆಂಗಳೂರಿನ ಕಡೆಗೆ ರಕ್ಷಿತಾಳ ಜೀವಂತ ಹೃದಯವನ್ನು ತೆಗೆದುಕೊಂದು ಹೋಗಲಾಗಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೃದಯ ರವಾನೆಯಾಗಿದೆ. ಯುವತಿ ರಕ್ಷಿತಾಳ ಒಟ್ಟು ಒಂಭತ್ತು ಅಂಗಗಳನ್ನು ದಾನ ಮಾಡಿ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ.ಸಾವನ್ನಪಿ ರಕ್ಷಿತಾಳನ್ನು ನೆನೆದು ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರೆಲ್ಲ ಕಣ್ಣೀರಿಟ್ಟಿದ್ದಾರೆ. ವಿದ್ಯಾರ್ಥಿನಿ ರಕ್ಷಿತಾಗೆ ಸಾವಿರಾರು ವಿದ್ಯಾರ್ಥಿನಿಯರು ಕಣ್ಣೀರಿನ ವಿದಾಯ ಹೇಳಿದ್ದಾರೆ.
ಚಿಕ್ಕಮಗಳೂರು ನಗರದ ಬಸವನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಯುವತಿ ವ್ಯಾಸಂಗ ಮಾಡುತ್ತಿದ್ದಳು. ಮೊನ್ನೆ ಮನೆಗೆ ಹಿಂದಿರುವಾಗ ಬಸ್ಸಿನಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಗಾಯಗೊಂಡಿದ್ದ ರಕ್ಷಿತಾಳನ್ನು ಸ್ಥಳೀಯರು, ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನವನ್ನು ಮಾಡಿದ್ದರು. ಆದರೆ ರಕ್ಷಿತಾಳ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಆಕೆಯನ್ನು ಬದುಕಿಸಲು ಸಾಧ್ಯವೇ ಇಲ್ಲ ಎಂದು ವೈದ್ಯರು ತಿಳಿಸಿದ್ದರು. ಕೊನೆಗೆ ರಕ್ಷಿತಾಳ ಬೇರೆಲ್ಲಾ ಅಂಗಾಂಗಗಳಿಗೆ ಯಾವುದೇ ತೊಂದರೆ ಅಗದ ಹಿನ್ನೆಲೆಯಲ್ಲಿ, ಅಂಗಾಂಗ ದಾನಕ್ಕೆ ನೀವು ಮುಂದಾಗಬಹುದು ಎಂದು ವೈದ್ಯರು ರಕ್ಷಿತಾಳ ಕುಟುಂಬಕ್ಕೆ ಮಾಹಿತಿ ಮಾಹಿತಿ ನೀಡಿದ್ದರು.
ದುಃಖದ ಸ್ಥಿತಿಯಲ್ಲೂ ರಕ್ಷಿತಾಳ ಪೋಷಕರಾದ ಲಕ್ಷ್ಮಿ ಬಾಯಿ, ಶೇಖರ್ ನಾಯ್ಕ್ ಮಗಳ ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಆಕೆಯ ಸಾವಿಗೆ ಸಾರ್ಥಕತೆ ಕೊಡಿಸಲು ಮುಂದಾಗಿದ್ದಾರೆ. ಎರಡು ಕಣ್ಣುಗಳು, ಹೃದಯ, ಕಿಡ್ನಿಗಳು, ಎರಡು ಶ್ವಾಸಕೋಶಗಳು ಸೇರಿ ಒಟ್ಟು ಒಂಭತ್ತು ಮಂದಿಗೆ ರಕ್ಷಿತಾಳ ಅಂಗಾಂಗಗಳನ್ನ ಜೋಡಿಸಲು ತೀರ್ಮಾನಿಸಲಾಗಿತ್ತು. ಇದಕ್ಕಾಗಿಯೇ ಚಿಕ್ಕಮಗಳೂರಿಗೆ ಬೆಂಗಳೂರು, ಚೆನ್ನೈಯಿಂದ ನುರಿತ ವೈದ್ಯರ ತಂಡ ಆಗಮಿಸಿತ್ತು. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿದ್ದ ರಕ್ಷಿತಾಳ ಅಂಗಾಂಗಳನ್ನು ಹೆಲಿಕ್ಯಾಪ್ಟರ್ ಮೂಲಕ ರವಾನೆ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿಕೊಂಡಿತ್ತು.
ಬಡತನಲ್ಲಿದ್ದ ತಂದೆ-ತಾಯಿಗೆ ಉಜ್ವಲ ಭವಿಷ್ಯ ಕೊಡಬೇಕು ಎನ್ನುವ ಉದ್ದೇಶ ರಕ್ಷಿತಾಳದ್ದಾಗಿತ್ತು, ಆದರೆ ಇದೀಗ ರಕ್ಷಿತಾ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. 9 ಜನರ ಜೀವಕ್ಕೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ತೋರುತ್ತಿರುವ ರಕ್ಷಿತಾ ಮಾದರಿ ಆಗಿದ್ದಾರೆ. ಈ ಮೂಲಕ ಕಾಫಿನಾಡು ಇದೇ ಮೊದಲ ಬಾರಿಗೆ ಇಂತಹದೊಂದು ಅಪರೂಪದ ಪ್ರಕರಣಕ್ಕೆ ಸಾಕ್ಷಿ ಆಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಚಿಕ್ಕಮಗಳೂರು ನಗರದಿಂದ ಸ್ವಗ್ರಾಮಕ್ಕೆ ರಕ್ಷಿತಾ ಮೃತದೇಹ ರವಾನೆ ಆಗುತ್ತಿದ್ದಂತೆ ವಿದ್ಯಾರ್ಥಿನಿಯರು ಸ್ನೇಹಿತೆಯನ್ನು ಕಳೆದುಕೊಂಡು ಬಿಕ್ಕಳಿಸಿ ಅತ್ತಿದ್ದಾರೆ.ರಕ್ಷಿತಾಳ ಮೃತದೇಹ ನೋಡಿ ಶಿಕ್ಷಕರು, ಸಾರ್ವಜನಿಕರು ಕೂಡ ಕಣ್ಣೀರಿಟ್ಟಿದ್ದಾರೆ. ಒಟ್ಟಾರೆಯಾಗಿ ರಕ್ಷಿತಾಳ ಸಾವಿನ ಸುದ್ದಿ ಕೇಳುತ್ತಿದ್ದಂತೆ ಇಡೀ ಸೋಮನಹಳ್ಳಿ ತಾಂಡವೇ ಮರುಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


