ಚಿತ್ರದುರ್ಗ: ಪೌರಕಾರ್ಮಿಕರ ಬದುಕನ್ನು ಹಸನಾಗಿಸುವುದು ನಮ್ಮ ಸರ್ಕಾರದ ಮೂಲ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ ಎಂದು ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಹಿರಿಯೂರು ತಾಲ್ಲೂಕಿನ ನೆಹರು ಕ್ರೀಡಾಂಗಣದ ಹಳೇ ಕಡಲೆಕಾಯಿ ಮಂಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕರಲ್ಲಿ 11,133 ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲಾಗಿದೆ. ರಾಜ್ಯದ ಎಲ್ಲಾ ರೀತಿಯ ಖಾಯಂ ಹೊರಗುತ್ತಿಗೆ ಮತ್ತು ಇತರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಸರ್ಕಾರಿ ನೌಕರರರೆಂದು ಪರಿಗಣಿಸಲಾಗುವುದು, ಪೌರಕಾರ್ಮಿಕರಿಗೆ ಸರ್ಕಾರ ಊಟ ನೀಡುವಲ್ಲಿ ಅನುಕೂಲಕರವಾಗಿ ಬದಲಾವಣೆ ತರಲಾಗಿದೆ ಎಂದು ಅವರು ಹೇಳಿದರು.
ಪೌರಕಾರ್ಮಿಕರು ದುರಾಭ್ಯಾಸಗಳಿಂದ ದೂರವಿದ್ದು, ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಲ್ಲಿ ಹೆಚ್ಚು ಗಮನ ಕೊಡಬೇಕು. ಎಲ್ಲಂದರಲ್ಲಿ ಕಸ ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ನಗರದಲ್ಲಿ ಪೌರಕಾರ್ಮಿಕರಿಗೆ 624+1,148 ಮನೆ ನಿರ್ಮಾಣ ಮಾಡಲು ತಯಾರಿ ನಡೆದಿದ್ದು, ಪೌರಕಾರ್ಮಿಕರಿಗೆ ಪ್ರತ್ಯೇಕ ಸೂರು ಕಲ್ಪಿಸಲಾಗುವುದು, ನಗರಕ್ಕೆ ಒಳಚರಂಡಿ ವ್ಯವಸ್ಥೆಗಾಗಿ 100 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಇದು ಆರಂಭವಾಗಲಿದೆ, ಒಳಚರಂಡಿ ನಿರ್ಮಾಣದಿಂದ ಪೌರಕಾರ್ಮಿಕರ ಶ್ರಮ ಕಡಿಮೆಯಾಗುತ್ತದೆ ಎಂದರು.
ಹಿರಿಯೂರು ತಾಲ್ಲೂಕಿನ ನಗರಸಭೆ ಆಡಳಿತದಿಂದ ನಗರಸಭೆ ಪೌರಾಯುಕ್ತರಾದ ಡಿ. ಉಮೇಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪ್ರವರ್ಗ 01ರ ರಾಜ್ಯಾಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಪೌರಕಾರ್ಮಿಕರು ನಗರದ ಸ್ವಚ್ಛತೆಯ ಕಾರ್ಯವನ್ನು ನಿರ್ವಹಿಸುವ ಜೊತೆಗೆ, ನಗರದ ವಿವಿಧ ಮನೆಗಳ ಕಸವಿಲೇವಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಈ ಮೂಲಕ ನಗರದ ನಾಗರಿಕರ ಆರೋಗ್ಯ ರಕ್ಷಣೆ ಮಾಡುತ್ತಿರುವ ಪೌರಕಾರ್ಮಿಕರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಇದೇ ವೇಳೆ ನಗರದ 147 ಪೌರಕಾರ್ಮಿಕರಿಗೆ ವೈಯಕ್ತಿಕವಾಗಿ ಸಮವಸ್ತ್ರ ವಿತರಣೆ ಮಾಡಿ, ನಂತರ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ತಹಶೀಲ್ದಾರ್ ಪ್ರಶಾಂತ ಕೆ. ಪಾಟೀಲ, ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್, ನಗರಸಭೆ ಸದಸ್ಯರುಗಳಾದ ಮಹೇಶ್ ಪಲ್ಲವ, ಎಂ.ಡಿ.ಸಣ್ಣಪ್ಪ, ಕೇಶವಮೂರ್ತಿ, ಜಯವಾಣಿ, ಸರವಣ, ಶಂಷುನ್ನಿಸಾ, ಬಿ.ಎನ್.ಪ್ರಕಾಶ್, ಚಿತ್ರಜಿತ್ ಯಾದವ, ಮಲ್ಲೇಶ್, ರಾಘವೇಂದ್ರ, ರತ್ನಮ್ಮ, ಸುರೇಖ, ಅಂಬಿಕಾ ಯಾನೆ ಅಂಬಿಕಾಬಾಯಿ, ಗೀತಾಗಂಗಾಧರ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ದುರುಗೇಶ್ , ನಗರಸಭೆ ಅಧಿಕಾರಿಗಳಾದ ರಮೇಶ್, ಅಶೋಕ್, ಸಂಧ್ಯಾ, ಮೀನಾಕ್ಷಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy