ರಾಮನಗರ, ಸೆಪ್ಟೆಂಬರ್, 27: ಫೆಬ್ರವರಿ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಕವಚ 108ರ ಸೇವೆಯನ್ನು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಮೇಲ್ದರ್ಜೆಗೇರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಈ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದರು. ಆರೋಗ್ಯ ಸಚಿವರು ಹೇಳಿಕೆ ನೀಡಿ 8 ತಿಂಗಳು ಕಳೆದಿದ್ದು, ಆರೋಗ್ಯ ಕವಚ ಯೋಜನೆಯ ಉನ್ನತೀಕರಣವೂ ಆಗಿಲ್ಲ. ಕಾಲ್ ಸೆಂಟರ್ ಸರ್ವರ್ ಸಮಸ್ಯೆಯಿಂದಾಗಿ ತುರ್ತು ಕರೆ ಕನೆಕ್ಟ್ ಆಗದೆ ಆರೋಗ್ಯ ಕವಚ ಹೆಸರಿನ 108 ಆ್ಯಂಬುಲೆನ್ಸ್ ಸೇವೆ ನೊಂದವರಿಗೆ ಸಿಗದೆ ಅನಾರೋಗ್ಯ ಪೀಡಿತವಾಗಿದೆ.
ರಾಜ್ಯ ಮಟ್ಟದಲ್ಲಿ 108 ಆ್ಯಂಬುಲೆನ್ಸ್ ಉಚಿತ ಕರೆಯ ಸರ್ವರ್ ಸಮಸ್ಯೆ ಉಂಟಾಗಿದೆ. ಇದರಿಂದ ತುರ್ತು ಕರೆ ಸಂಪರ್ಕ ಸಿಗದೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಹಿಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯ ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ತುರ್ತು ಕರೆಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಂ ಸ್ಥಾಪಿಸಿದೆ.
90363 96689 ಹಾಗೂ 88800 03210 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದೆ. ಜನರು ಆರೋಗ್ಯ ಇಲಾಖೆ ನೀಡಿರುವ ದೂರವಾಣಿ ಸಂಖ್ಯೆಗೆ ಕರೆಮಾಡಿ 108 ಆ್ಯಂಬುಲೆನ್ಸ್ ಸೌಲಭ್ಯ ಪಡೆಯಲು ಮನವಿ ಮಾಡಿದ್ದಾರೆ. ಪ್ರಸ್ತುತ ವ್ಯವಸ್ಥೆ ಮುಂದಿನ ಆದೇಶ ಬರುವವರೆಗೂ ಚಾಲ್ತಿಯಲ್ಲಿ ಇರುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ರಾಜ್ಯದ ಯಾವುದೇ ಭಾಗದಿಂದ 108 ನಂಬರ್‌ಗೆ ಕರೆ ಮಾಡಿದರೆ 20 ರಿಂದ 30 ನಿಮಿಷಗಳ ಒಳಗೆ ಆ್ಯಂಬುಲೆನ್ಸ್ ಅವಶ್ಯಕತೆ ಇರುವಡೆಗೆ ತಲುಪುವ ವ್ಯವಸ್ಥೆಯೇ “ಆರೋಗ್ಯ ಕವಚ” ಸೇವೆ. 2008ರ ನವಂಬರ್ 01ರಂದು ರಾಜ್ಯ ಸರ್ಕಾರವು “ಆರೋಗ್ಯ ಕವಚ” ಎಂಬ ಈ ವಿನೂತನ ಯೋಜನೆಯನ್ನು ಲೋಕಾರ್ಪಣೆ ಮಾಡಿತ್ತು. ಕಳೆದ 14 ವರ್ಷಳಿಂದ “ಜಿವಿಕೆ” ಸಂಸ್ಥೆ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸೇವೆಯ ಜವಾಬ್ದಾರಿಯನ್ನು ಹೊತ್ತಿದ್ದು, ರಾಜ್ಯಾದ್ಯಂತ ಸುಮಾರು 3,500ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಆ್ಯಂಬುಲೆನ್ಸ್ ವಾಹನಕ್ಕೆ ನಾಲ್ಕು ಜನ ಸಿಬ್ಬಂದಿಯಂತೆ ಪಾಳಿ ಪದ್ಧತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
108 ಆರೋಗ್ಯ ಕವಚ ಆ್ಯಂಬುಲೆನ್ಸ್ ಸೇವೆ ಹೊಣೆ ಹೊತ್ತಿರುವ ಜಿವಿಕೆ ಸಂಸ್ಥೆಯ ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸುವ ಮೂರು ಆ್ಯಂಬುಲೆನ್ಸ್‌ಗಳು ಕೆಟ್ಟು ನಿಂತಿವೆ. ರಾಮನಗರ ಜಿಲ್ಲೆಗೆ 12 ವಾಹನಗಳು ಸೇವೆಗೆ ನೇಮಕವಾಗಿದ್ದು, ಇದರಲ್ಲಿ 5 ವಾಹನಗಳು ಕೆಟ್ಟು ನಿಂತು ಬಹಳ ದಿನಗಳಾವೆ. ವಾಹನದ ಟೈರ್ ಬದಲಾವಣೆಗೂ ಜಿವಿಕೆಯಿಂದ ಅನುದಾನ ಬಿಡುಗಡೆ ಆಗಿಲ್ಲ. ಇರುವ ವಾಹನಗಳಲ್ಲೇ ಮಾರ್ಗ ಬದಲಾವಣೆ ಮಾಡಿಕೊಂಡು ಆ್ಯಂಬುಲೆನ್ಸ್ ಸೇವೆ ನೀಡುತ್ತವೆ ಎಂದು ವಾಹನ ಚಾಲಕರು ಹೇಳುತ್ತಿದ್ದಾರೆ.
ಚನ್ನಪಟ್ಟಣ ನಗರ, ಕೋಡಂಬಳ್ಳಿ, ಸಾತನೂರು, ಹಾರೋಹಳ್ಳಿ ಹಾಗೂ ಬಿಡದಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆಗೆ ನಿಗದಿಯಾಗಿರುವ 5 ಆ್ಯಂಬುಲೆನ್ಸ್ ವಾಹನಗಳು ಕೆಟ್ಟು ನಿಂತಿವೆ. ವಾಹನಗಳ ದುರಸ್ತಿಗೆ ಹಣ ಕೇಳಿದರೆ ಫಂಡ್ ಇಲ್ಲ ಎಂದು ಜಿವಿಕೆ ಸಂಸ್ಥೆಯ ಮೇಲಾಧಿಕಾರಿಗಳು ಉತ್ತರ ನೀಡುತ್ತಾರೆ. ಇನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ನೊಂದ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ 12 ಆ್ಯಂಬುಲೇನ್ಸ್ ವಾಹನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಕಳೆದ ಎರಡು ತಿಂಗಳುಗಳಿಂದ ಜಿವಿಕೆ ಸಂಸ್ಥೆ ಸಂಬಳ ನೀಡಿಲ್ಲ. ಇನ್ನು ಸಿಬ್ಬಂದಿ ಅರ್ಹತೆಗೆ ತಕ್ಕ ರೀತಿ ಸಂಬಳವನ್ನು ನೀಡುತ್ತಿಲ್ಲ. ಸುಮಾರು 10 ವರ್ಷ ಸೇವೆಗೈದಿದ್ದರೂ ಕೂಡ ಕೇವಲ 13 ಸಾವಿರ ಮಾತ್ರ ಸಂಬಳ ನೀಡುತ್ತಿದ್ದಾರೆ ಎಂದು ಆರೋಗ್ಯ ಕವಚ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಈಗಾಗಲೇ ಆಂಧ್ರಪ್ರದೇಶದಲ್ಲಿ ಉತ್ತಮ ಆ್ಯಂಬುಲೆನ್ಸ್ ಸೇವೆ ನೀಡುವಲ್ಲಿ ವಿಫಲವಾದ ಜಿವಿಕೆ ಸಂಸ್ಥೆಯೊಂದಿಗಿನ ಒಪ್ಪಂದ ಕೈಬಿಟ್ಟಿದೆ. ಅದರೆ ಕರ್ನಾಟಕದಲ್ಲಿ ಜಿವಿಕೆ ಸಂಸ್ಥೆ ನೌಕರರನ್ನೂ ಶೋಷಣೆ ಮಾಡಿತ್ತಿದ್ದು, ಈ ಬಗ್ಗೆ ಸರ್ಕಾರದ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನೌಕರರು ಆರೋಪಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


