ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಸಂಭವಿಸಿದೆ.
ನೆಲಮಂಗಲ ತಾಲೂಕಿನ ಮರಳುಕುಂಟೆ ಗ್ರಾಮದ ಮಹೇಶ್ (27) ಮತ್ತು ಮಾರುತಿ (24) ಮೃತ ದುರ್ದೈವಿಗಳು.
ಮಧುರೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಗ್ರಾಮಕ್ಕೆ ಬೈಕ್ ನಲ್ಲಿ ಹಿಂತಿರುಗುತ್ತಿದ್ದಾಗ ದೊಡ್ಡಬಳ್ಳಾಪುರದ ಬಳಿಯ ಎಂಎಸ್ ಜಿಪಿ ಘಟಕಕ್ಕೆ ಕಸ ಸುರಿಯಲು ಬೆಂಗಳೂರಿಂದ ಬರುತ್ತಿದ್ದ ಬಿಬಿಎಂಪಿ ಕಸದ ಲಾರಿಗೆ ಹೊಡೆದಿದೆ. ಇದರಿಂದ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ನಂತರ ಚಾಲಕ ಸ್ಥಳದಿಂದ ಪರಾರಿಯಾಗುತ್ತಿದ್ದು, ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಚಾಲಕ ಬೆನ್ನತ್ತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಲಾರಿಯ ಚಾಲಕ ಪಾನಮತ್ತನಾಗಿದ್ದು, ತಡೆದು ನಿಲ್ಲಿಸಲು ಹೋದ ಕಾರಿಗೂ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮೃತ ಯುವಕರ ಶವವನ್ನು ತೆರವು ಮಾಡಲು ಬಿಡದೆ, ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಶಾಸಕ ಟಿ.ವೆಂಕಟರಮಣಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್ ಮತ್ತಿತರರು ಭೇಟಿ ನೀಡಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ
ಕಳೆದ ಎರಡು ತಿಂಗಳ ಹಿಂದೆ ಸಹ ಬೈಕ್ ಸವಾರ ಬಿಬಿಎಂಪಿ ಕಸದ ಲಾರಿಗೆ ಬಲಿಯಾಗಿದ್ದ. ಈಗ ಇಬ್ಬರು ಸಾವನ್ನಪ್ಪಿದ್ದು ಬಿಬಿಎಂಪಿ ಕಸದ ಲಾರಿಗಳ ವಿರುದ್ಧ ಸ್ಥಳೀಯರು ತಿರುಗಿಬಿದ್ದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


