ಅಮರಾವತಿ/ವಿಜಯವಾಡ: ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಅನ್ನದಾನ ಕಾರ್ಯಕ್ರಮದ ವೇಳೆ ತೀವ್ರ ಆಘಾತಕಾರಿ ಘಟನೆಯೊಂದು ನಡೆದಿದೆ. ಕುದಿಯುತ್ತಿದ್ದ ಸಾಂಬಾರ್ ತುಂಬಿದ್ದ ದೊಡ್ಡ ಪಾತ್ರೆಗೆ ಆಕಸ್ಮಿಕವಾಗಿ ಬಿದ್ದು ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸುಜಾತಾ (46) ಮೃತಪಟ್ಟ ಮಹಿಳೆಯಾಗಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಗಣೇಶೋತ್ಸವ ಆಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಸುಜಾತಾ ಅವರು ಆಹಾರ ತಯಾರಿಕೆ ಹಾಗೂ ಸಿದ್ಧತೆಯ ಕೆಲಸಗಳಲ್ಲಿ ಸಕ್ರಿಯವಾಗಿ ನೆರವಾಗುತ್ತಿದ್ದರು. ಭಾನುವಾರ ಬೆಳಿಗ್ಗೆ ಸಾಂಬಾರ್ ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ, ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕುದಿಯುತ್ತಿದ್ದ ಸಾಂಬಾರ್ ತುಂಬಿದ್ದ ಬೃಹತ್ ಪಾತ್ರೆಯೊಳಗೆ ಬಿದ್ದಿದ್ದಾರೆ.
ಘಟನೆಯಲ್ಲಿ ಸುಜಾತಾ ಅವರ ದೇಹಕ್ಕೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದವು. ತಕ್ಷಣವೇ ಆಯೋಜಕರು ಹಾಗೂ ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಿದ್ದರು. ಆದರೆ, ಗಾಯಗಳ ತೀವ್ರತೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸುಜಾತಾ ಅವರು ಸಾಂಬಾರ್ ಪಾತ್ರೆಗೆ ಬೀಳುವ ದಾರುಣ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ದಾಖಲಾಗಿದೆ. ಸುಜಾತಾ ಅವರು ಪಾತ್ರೆಗೆ ಹೇಗೆ ಬಿದ್ದರು ಹಾಗೂ ಘಟನೆಗೆ ಕಾರಣವಾದ ಪರಿಸ್ಥಿತಿಗಳ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹಬ್ಬದ ಸಂಭ್ರಮದ ನಡುವೆ ನಡೆದ ಈ ದುರಂತದಿಂದ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ಥಳೀಯರು ತೀವ್ರ ಶೋಕಸಾಗರದಲ್ಲಿ ಮುಳುಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
