ಚಿಂಚೋಳಿ: ತಾಲ್ಲೂಕಿನ ರಾಮತೀರ್ಥ ಗ್ರಾಮದಲ್ಲಿ ದಿ.ಆರ್.ಎಂ.ನಾಟೀಕಾರ್ ಅವರ 72ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೋಲಿ ಕಬ್ಬಲಿಗ ಸಮಾಜದ ಪರ್ಯಾಯ ಬೇರೆ ಬೇರೆ ಜಾತಿಯವರು ಕೂಡಾ ಅಂಬಿಗರ ಚೌಡಯ್ಯನವರ ಹೆಸರಲ್ಲಿ ಒಗ್ಗೂಡುತ್ತಿದ್ದೀರಿ. ನೀವೆಲ್ಲಾ ಮುಗ್ಧ ಹಾಗೂ ಹಿಂದುಳಿದವರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅಂಬಿಗರ ಚೌಡಯ್ಯ ನಿಗಮ ಸ್ಥಾಪನೆ ಮಾಡಲಾಯಿತು.
ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಕಬ್ಬಲಿಗ ಕೋಲಿ ಸಮಾಜವನ್ನು ST ಸೇರಿಸಲಾಗುತ್ತದೆ ಎಂದು ಹೇಳಿದ ನಂತರ ಅವರಿಗೆ ಬೆಂಬಲಿಸಿದಿರಿ ಆದರೆ ಇನ್ನೂ ಆಗಿಲ್ಲ. ನಾನು ಸಚಿವನಾಗಿದ್ದಾಗ ಕೋಲಿಯನ್ನು ST ಸೇರಿಸಲು ಅಗತ್ಯ ಕ್ರಮ ಕೈಗೊಂಡಿದ್ದೆ. ಇತ್ತೀಚಿಗೆ ನಾನೇ ದಿಲ್ಲಿಗೆ ಹೋಗಿ ವಾಸ್ತವ ಸ್ಥಿತಿ ಅರಿತುಕೊಂಡಾಗ ST ಗೆ ಸೇರಿಸುವ ಪ್ರಸ್ತಾವನೆ ಹಾಗೆ ಇದೆ ಎಂದು ತಿಳಿಸಿದರು.
ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ಚೌಡದಾನಪುರದ ಅಭಿವೃದ್ದಿಗೆ ರೂ 5 ಕೋಟಿ ಅನುದಾನ ಬಿಡುಗಡೆ ಮಾಡಿದ್ದೆ. ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪನೆಗೆ ರೂ 4 ಕೋಟಿ ಬಿಡುಗಡೆ ಮಾಡಿದ್ದೆ ಆದರೂ ನಮ್ಮನ್ನು ಸಮಾಜದ ವಿರೋಧಿಗಳಂತೆ ಬಿಂಬಿಸಲಾಗುತ್ತಿದೆ. ನೀವೆಲ್ಲ ಸತ್ಯ ಹೇಳುವವರನ್ನ ಕೆಲಸ ಮಾಡುವವರನ್ನು ನಂಬಿ ಆಶೀರ್ವಾದ ಮಾಡಿ ಎಂದು ಮನವಿ ಮಾಡುತ್ತೇನೆ ಎಂದರು.
ವರ್ಣಭೇದ ನೀತಿಯ ವಿರುದ್ದ ಹೋರಾಡಿ 28 ವರ್ಷ ಜೈಲಿನಲ್ಲಿದ್ದ ನೆಲ್ಸನ್ ಮೆಂಡೇಲಾ ಅವರ ಹೆಸರಲ್ಲಿ R.M ನಾಟೀಕಾರ ಅವರ ಶಾಲೆ ಆರಂಭಿಸಿದ್ದಾರೆ. ಕಾರಣ ಮೆಂಡೇಲಾ ಅವರಂತೆ ಹೋರಾಟ ಮನೋಭಾವನೆ ಮೈಗೂಡಿಸಿಕೊಂಡಿದ್ದರು ಎಂದು ಅರ್ಥೈಸಬಹುದಾಗಿದೆ. ಮೆಂಡೆಲಾ ಕೂಡಾ ಶಿಕ್ಷಣಕ್ಕೆ ಮಹತ್ವ ನೀಡಿದ್ದರು ಹಾಗಾಗಿ ಅವರಿಂದ ಸ್ಪೂರ್ತಿ ಪಡೆದು ಶಾಲೆ ಆರಂಭಿಸಿದರು ಎಂದು ಅವರು ಹೇಳಿದರು.
ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಅವರಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸುವತ್ತ ಪೋಷಕರು ಗಮನ ಹರಿಸಬೇಕು. ತಮ್ಮ ಮಕ್ಕಳಿಗೆ ಕೇಸರಿ ಶಾಲು ಹಾಕಿ, ಧರ್ಮ ರಕ್ಷಣೆಗೆ ಕಳಿಸಿ ಎಂದು ಕರೆಯುವವರೊಂದಿಗೆ ಕಳಿಸಬೇಡಿ ಎಂದರು.
ಈ ಸಂದರ್ಭದಲ್ಲಿ ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಅಲ್ಲಮಪ್ರಭು ಸಂಸ್ಥಾನಮಠ ತೊನಸನಹಳ್ಳಿ, ಡಾ ಅಜಯ್ ಸಿಂಗ್ ಮುಖ್ಯ ಸಚೇತಕರು, ತೆಲಂಗಾಣದ ಶಾಸಕರಾದ ಈಟಲ ರಾಜೇಂದ್ರ ಡಾ ತಳವಾರ ಸಾಯಬಣ್ಣ, ಡಾ ಶರಣಪ್ರಕಾಶ ಪಾಟೀಲ, ತಿಪ್ಪಣ್ಣಪ್ಪ ಕಮಕನೂರು ಸೇರಿದಂತೆ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy