- ಆಂಟೋನಿ, ಬೇಗೂರು
ಬೆಂಗಳೂರು: ಬೇಗೂರು ಲೂರ್ದು ಮಾತೆಯ ಹಬ್ಬವನ್ನು ಫೆಬ್ರವರಿ 12ರಂದು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು. ಏನಿದು ಈ ಬೇಗೂರಿನ ಗವಿಮಾತೆಯ ವಿಶೇಷತೆ ತಿಳಿಯೋಣ ಬನ್ನಿ…
ಗವಿ ಮಾತೆಯ ಇತಿಹಾಸ (ಲೂರ್ದು ಮಾತೆಯ ) ವಿಶೇಷತೆ.
ಯಾರು ಈ ಮಾತೆ ?
ನೂರಾರು ವರ್ಷಗಳಿಂದ ಬೆಳೆದು ಬಂದ ಬೇಗೂರು ಗ್ರಾಮದಲ್ಲಿ ಇದ್ದಕ್ಕಿದ್ದ ಹಾಗೆ 1940ರಲ್ಲಿ ಭೀಕರವಾದ ಪ್ಲೇಗ್ ರೋಗವು ಊರನ್ನು ಆವರಿಸಿಕೊಂಡು ಮರಣ ತಾಂಡವವಾಡತೊಡಗಿತು. ನೂರಾರು ಜನರು ದಿನದಿಂದ ದಿನಕ್ಕೆ ಈ ಭೀಕರವಾದ ರೋಗಕ್ಕೆ ಬಲಿಯಾಗುತ್ತಾ ಇಡೀ ಊರೇ ನಾಶದ ಪಥದಲ್ಲಿ ಸಿಲುಕಿತು. ಅಂದಿನ ವಿಚಾರಣೆ ಗುರುಗಳು ಮತ್ತು ಊರ ಜನರು ಇಂಥ ಭಯಂಕರ ಕಾಯಿಲೆಯಿಂದ ಪಾರಾಗಲು ಏನು ಮಾಡುವುದು ಎಂದು ಅರಿಯದೆ “ದೇವರೇ ದಿಕ್ಕು” ಎಂದು, ಲೋಕದ ರಕ್ಷಣೆಗೆ ನೆರವಾಗಲು ಮಣಿದ ದೇವ ಮಾತೆಯ ಸ್ವರೂಪವನ್ನು ಪ್ರತಿಷ್ಠಾಪಿಸಿ ಎಡಬಿಡದೆ ಅವಳಲ್ಲಿ ಪ್ರಾರ್ಥಿಸುತ್ತಾ, ಜಪಮಾಲೆಯನ್ನು ಹೇಳುತ್ತಾ, ಭಕ್ತಿಯಿಂದ ಮೊರೆಯಿಟ್ಟರು. ಬೇಡಿದವರನ್ನು ಇದುವರೆಗೂ ಭೂಮಂಡಲದಲ್ಲಿ ನಿರಾಕರಿಸದಿರುವ ಈ ಮಾತೆಯು, ತನ್ನ ಕೃಪಾವರವನ್ನು ಸುರಿಸಿ ವಿನಾಶಕಾರಿಯಾದ ರೋಗದಿಂದ ಈ ಊರನ್ನು ವಿಮುಕ್ತಿಗೊಳಿಸಿದಳು. ಅವಳ ಸ್ಮರಣಾರ್ಥಕವಾಗಿ ಊರ ಜನರು ಆಗಸ್ಟ್ 1ನೇ ತಾರೀಖು 1944ರಲ್ಲಿ ಗವಿಯನ್ನು ಕಟ್ಟಿದರು. ಸುಮಾರು ವರ್ಷಗಳ ಕಾಲ, ಆ ಮಾತೆಯ ಕೃಪಾವರದಿಂದ ಊರ ಜನರು ಸುಖಶಾಂತಿಯಿಂದ ಜೀವಿಸುತ್ತಿರಲು, ಮತ್ತೊಮ್ಮೆ 1963ರಲ್ಲಿ ಭೀಕರ ಕ್ಷಾಮವು ತಲೆದೂರಿತು. ಜನರೆಲ್ಲರೂ ವಿಪತ್ತಿನಿಂದ ಕಾಪಾಡಬೇಕೆಂದು ಅವಳಲ್ಲಿ ಪ್ರಾರ್ಥಿಸಲು ಮತ್ತೊಮ್ಮೆ, ಈ ತಾಯಿಯು ಭೀಕರ ಕ್ಷಾಮದಿಂದ ರಕ್ಷಿಸಿದಳು.
ಅಂದಿನಿಂದ ತನ್ನ ಮಕ್ಕಳನ್ನು ರಕ್ಷಿಸುವ ಹೊಣೆಯನ್ನು ಹೊತ್ತ ಮಾತೆಯು, ಬೇಡಿದವರಿಗೆ ಕೃಪಾವರವನ್ನು ದಯಪಾಲಿಸಿ, ನೊಂದವರಿಗೆ ಸಾಂತ್ವನ ನೀಡಿ, ದೀನದಲಿತರಿಗೆ ಆಶ್ರಯದಾತಳಾಗಿ, ಇಂದಿಗೂ ತನ್ನ ಮಕ್ಕಳನ್ನು ರಕ್ಷಿಸುತ್ತಿದ್ದಾಳೆ ಎಂಬುದಕ್ಕೆ ಈ ಊರಿನ ಜನರೇ ಸಾಕ್ಷಿ. ಅಂದು ಉಗಮವಾದ ಈ ಮಾತೆಯ ಅನುಗ್ರಹವು, ಆರಂಭವಾಯಿತೇ ವಿನ: ಅಂತ್ಯವಿಲ್ಲದೇ ನಿರಂತರವಾಗಿದೆ. ಇವರೇ ಬೇಗೂರಿನ ಗವಿ ಮಾತೆ.
ವರ್ಷಕ್ಕೆ ಒಮ್ಮೆ ಈ ಹಬ್ಬವನ್ನು ಆಚರಣೆ ಮಾಡವ ಮುನ್ನ 9 ದಿನಗಳ ನವೇನಾ ಪ್ರಾರ್ಥನೆ ಬಲಿ ಪೂಜೆಗಳಿಂದ ಆಚರಣೆ ಮಾಡಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಇಡೀ ಬೇಗೂರಿನ ಪ್ರತಿಯೊಬ್ಬರೂ ಜಾತಿ ಧರ್ಮವೆಂಬುದು ಇಲ್ಲದೆ ಈ ಮಾತೆಯ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಈ ವರ್ಷವೂ ಸಹ 9 ದಿನಗಳ ನವೇನಾ ಪ್ರಾರ್ಥನೆಯೊಂದಿಗೆ ಆರಂಭಿಸಿ ಹಬ್ಬದ ದಿನದಂದು ಅಂತ್ಯಗೊಳಿಸುತ್ತಾರೆ. ದೇವಾಲಯದಲ್ಲಿ ಮಾತ್ರವಲ್ಲದೆ ಊರಿನ ಅಲ್ಲಲ್ಲಿ ಕೆಲವೊಬ್ಬರು ದೇವಮಾತೆಯ ಸ್ವರೂಪವನ್ನು ಇಟ್ಟು ಅಲಂಕಾರವನ್ನು ಮಾಡಿ ಪೂಜಿಸಿ ಪ್ರಾರ್ಥಿಸಿ ನೋಡ್ದ ಮಾತೆಗೆ ಗೌರವವನ್ನು ಅರ್ಪಿಸುತ್ತಾರೆ.
ಧರ್ಮ ಕೇಂದ್ರದ ಗುರುಗಳು ಜನರು ಇಟ್ಟಿರುವ ದೇವ ಮಾತೆಯ ಸ್ವರೂಪಗಳಿಗೆ ಭೇಟಿ ಕೊಟ್ಟು ಆಶೀರ್ವದಿಸಿ ಹೋಗುತ್ತಾರೆ. ಈ ಬಾರಿಯೂ ಸಹ ಬೇಗೂರಿನ ಧರ್ಮ ಕೇಂದ್ರ ಗುರುಗಳಾದ ಫಾದರ್ ಆರೋಗ್ಯ ಸ್ವಾಮಿ ಸಭಾಸ್ಟಿನ್ ಧರ್ಮ ಕೇಂದ್ರಕ್ಕೆ ಹಾಗೂ ಬೇಗೂರಿನ ಪ್ರತಿಯೊಬ್ಬರಿಗಾಗಿಯೂ ಪ್ರಾರ್ಥಿಸಿ ಬೆಂಗಳೂರು ಮಹಾಧರ್ಮಧ್ಯಕ್ಷರಾದ ಪೀಟರ್ ಅವರನ್ನು ಕರೆಸಿ ಎಲ್ಲರಿಗೂ ಒಳಿತಾಗಲಿ ಎಂದು ಅವರ ಮೂಲಕ ಬಲಿ ಪೂಜೆಯನ್ನು ನೆರವೇರಿಸಿದರು.
ಹಬ್ಬದ ದಿನದಂದು ಆಡಂಬರದ ಗಾಯನ ಬಲಿ ಪೂಜೆ ನಂತರ ಹಲವಾರು ಕಡೆ ಅನ್ನ ದಾಸೋಹವನ್ನು ಏರ್ಪಡಿಸಿ ಅನೇಕ ಕಾರ್ಯಕ್ರಮಗಳ ಮೂಲಕ ಈ ಹಬ್ಬವನ್ನು ಮುಂದುವರಿಸುತ್ತಾ ಸಂಜೆ ಮಾತೆ ಮರಿಯಮ್ಮನವರ ಸ್ವರೂಪವನ್ನು ಇಟ್ಟಿರುವ ತೇರನ್ನು ಊರಿನ ಪ್ರತಿಯೊಂದು ಭಾಗಗಳಲ್ಲಿಯೂ ತೇರಿನ ಮೂಲಕ ಬರುತ್ತಾರೆ. ಈ ತೇರನ್ನು ನೋಡಲು ಎಲ್ಲಾ ಧರ್ಮದವರು ತೇರಿನ ಹಿಂದೆ ನಡೆದು ಬರುತ್ತಾರೆ.
ಈ ಬಾರಿ ಬೇಗೂರಿನ ಬಂಗಾರಿ ವಂಶಕ್ಕೆ ಸೇರಿದ ಬಂಗಾರಿ ಅಂಡ್ರಿಯಾಸ್ ಹಾಗೂ ಕಾಣಿಕ್ಯ ಮೇರಿ ಕುಟುಂಬ ದೇವ ಮಾತೆಯ ಸ್ವರೂಪವನ್ನು ಇಟ್ಟು ಧರ್ಮ ಕೇಂದ್ರದ ಗುರುಗಳ ಆಶೀರ್ವಾದ ಪಡೆದು ದೇವ ಮಾತೆಯ ಸ್ವರೂಪಕ್ಕೆ ಪ್ರಾರ್ಥಿಸಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು. ದೇವಮಾತೆಯ ಸ್ವರೂಪ ಅಲಂಕಾರವನ್ನು ಜೆಸ್ಸಿ ಪಿಂಟೋ ಮಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


