ಕೊರಟಗೆರೆ : ಮುಂಬರುವ 2023ರ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾಜಕೀಯ ಪಕ್ಷಗಳು ಸಮಾವೇಶಗಳನ್ನು ಮಾಡುವುದರ ಮತದಾರರ ಮನಸ್ಸು ಗೆಲ್ಲುವ ತಂತ್ರಗಾರಿಕೆ ಮಾಡುತ್ತಿದ್ದಾರೆ.
ಭಾನುವಾರ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶವು ಅದ್ದೂರಿಯಾಗಿ ಯಶಸ್ವಿ ಕಂಡಿತು. ಕೊರಟಗೆರೆ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಿರುವ ಕಾಂಗ್ರೆಸ್ ಕಚೇರಿ ರಾಜೀವ ಭವನ ಉದ್ವಾಟನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಿದ್ದು, ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಖರ್ಗೆ ಅವರಿಗೆ ಸಾಥ್ ನೀಡಿದ್ದು, ಆ ಮೂಲಕ ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಜೋರಾಗಿ ನಡೆಯಿತು.
ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಿಂದ ವೇದಿಕೆವರೆಗೂ ಯೂತ್ ಕಾಂಗ್ರೆಸ್ ಬೈಕ್ ರ್ಯಾಲಿ ಮಾಡುವುದರ ಮೂಲಕ ಕೈ ಪರವಾಗಿ ಘೋಷಣೆಗಳನ್ನು ಕೂಗಿದರು. ತೆರೆದ ವಾಹನದಲ್ಲಿ ವೇದಿಕೆವರೆಗೂ ಕಾಂಗ್ರೆಸ್ ನಾಯಕರು ಆಗಮಿಸಿ ಸರ್ಕಾರಿ ಡಿಗ್ರಿ ಕಾಲೇಜ್ ಬಳಿಯಿರುವ ರಾಜೀವ ಭವನ ಉದ್ವಾಟನೆ ನೆರವೇರಿಸಿದರು.
ಕೊರಟಗೆರೆ ಹಾಲಿ ಶಾಸಕ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಖರ್ಗೆಗೆ ರಾಜ್ಯ ಉಸ್ತುವಾರಿ ಸಚಿವ ರಣದೀಪ್ ಸಿಂಗ್ ಸುರ್ಜೆವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ಜೊತೆಗೆ ಜಿಲ್ಲೆಯ ಕಾಂಗ್ರೆಸ್ ನಾಯಕರು, ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದರು. ಚುನಾವಣೆ ಸಮೀಪ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜೀವ ಭವನದ ಉದ್ಘಾಟನೆಯ ನಂತರ ಮಾತನಾಡಿ, ಇದು ಕಾಂಗ್ರೆಸ್ ಪಕ್ಷದ ದೇವಾಲಯ, ಅನೇಕ ಜನ ದೇವಾಲಯ ಕಟ್ಟುತ್ತಾರೆ, ಹರಕೆ ಹೊರುತ್ತಾರೆ. ಆದರೇ ಈ ಗುಡಿ ಎಲ್ಲರಿಗೂ ಸರಿ ಸಮಾನವಾಗಿ ನೋಡುವ ಗುಡಿ ಇದು. ಹಿಂದೂ, ಕ್ರೈಸ್ತ, ಮುಸ್ಲಿಂ ಎಲ್ಲರನ್ನು ಸರಿಸಮಾನವಾಗಿ ನೋಡೋದು ಕಾಂಗ್ರೆಸ್ ಪಕ್ಷದ ದೇವಾಲಯ. ನಮ್ಮ ಹೋರಾಟಗಳು ಬಹಳ ಇದೆ, ಆ ಕಡೆ ಲಕ್ಷ್ಯ ಕೊಡಬೇಕಿದೆ. ಬಿಜೆಪಿ ಅವರು ಯಾವ ರೀತಿ ಪ್ರಜಾಪ್ರಭುತ್ವ ನಡೆಸ್ತಿದ್ದಾರೆ. ಸಂವಿಧಾನವನ್ನ ಯಾವ ರೀತಿ ದುರುಪಯೋಗ ಮಾಡ್ತಿದ್ದಾರೆ. ಎಲ್ಲವನ್ನೂ ನೀವು ಯೋಚನೆ ಮಾಡಬೇಕಿದೆ. ಮೋದಿ ಅವರು ನನ್ನ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ನಮ್ಮನ್ನ ಟೀಕೆ ಟಿಪ್ಪಣಿ ಮಾಡೋಕೆ ಅವರಿಗೆ ಅಧಿಕಾರ ಇದ್ಯಾ. ಸರ್ಕಾರಿ ಕಾರು, ಸರ್ಕಾರಿ ವಿಮಾನ ಬಳಸಿಕೊಂಡು ನಮ್ಮನ್ನ ಟೀಕೆ ಮಾಡ್ತಾರೆ ಎಂದರು.
40% ಕರಪ್ಷನ್ ಬಗ್ಗೆ ಮೋದಿ, ಅಮಿತ್ ಶಾ ಏನ್ ಹೇಳ್ತಾರೆ? ನಿಮ್ಮ ಕೆಳಗಡೆ ಕರೆಪ್ಷನ್ ಇದೆ. ಅದನ್ನೇ ನೀವು ನೋಡ್ತಾ ಇಲ್ಲಾ. 40% ನೀವು ಹೊಡೆಯಿರಿ, ಮಿಕ್ಕಿದ್ದು ಪಾರ್ಟಿಗೆ ಕಳಿಸಿ ಅಂತಾರೆ. ಅಲ್ಲಿಗೆ 100% ಅವರಿಗೆ ಸರಿಹೋಯ್ತು. ನನ್ನ ರಾಜಕೀಯ ಇತಿಹಾಸದಲ್ಲಿ ಇಂತಹ ಪ್ರಧಾನಿಯನ್ನ ನೋಡಿಲ್ಲಾ. ಎಲ್ಲಿ ಹೋದ್ರು ಕಾಂಗ್ರೆಸ್ ಮುಖಂಡರನ್ನ ಬಯ್ಯೋದು. ತುಮಕೂರಿನಲ್ಲಿ ಹೆಚ್ ಎಎಲ್ ಹೆಲಿಕಾಪ್ಟರ್ ಡಿವಿಷನ್ ಓಪನ್ ಮಾಡಿದ್ರು. ಹೆಚ್ ಎಎಲ್ ಯುನಿಟ್ ತಂದವರು ಯಾರು. ಆಂಟನಿಯವರು ಅಪ್ರೂವ್ ಮಾಡಿಕೊಟ್ಟದನ್ನು ತಂದು ನಾನ್ ಮಾಡ್ದೆ ಅಂತಾರೆ.
ಮೋದಿ ಅವರು ಒಂದಾದ್ರೂ ಡ್ಯಾಂ ಕಟ್ಟಿದ್ದಾರಾ? ನೀರಾವರಿ ಯೋಜನೆ ಮಾಡಿದ್ದಾರಾ? ಹೇಮಾವತಿ ನೀರು ಬಂತು, ಅದು ಏನ್ ಮೋದಿ ಅವರು ತಂದು ಕೊಟ್ರಾ? ಪ್ರತಿಯೊಂದು ಕಡೆ ಮೋದಿ, ಶಾ ಹೋಗಿ ನಾನ್ ಮಾಡ್ದೆ ಅಂತಾರೆ. ದೇಶಕ್ಕೆ ಸ್ವಾತಂತ್ರ್ಯ 2014ರಲ್ಲಿ ಬಂದಿದೆ ಅಂತಾ ತಿಳಿದುಕೊಂಡಿದ್ದಾರೆ. 1947ರಿಂದ 2014 ರವರೆಗೂ ಸಾವಿರಾರು ಕೆಲಸ ನಾವ್ ಮಾಡಿದ್ದೇವೆ. ಗ್ರೀನ್ ರೆವಲ್ಯೂಷನ್ ಮಾಡಿ ಜನರ ಹೊಟ್ಟೆ ತುಂಬಿಸೋಕೆ ಪ್ರಯತ್ನ ಮಾಡಿದ್ದೇವೆ. ಮೋದಿ ಬರೋಕೆ ಮುಂಚೆ ನಾವೇನ್ ಉಪವಾಸ ಇರ್ತಿದ್ವಾ?. ಊಟನೇ ಮಾಡ್ತಿರಲಿಲ್ವಾ ನಾವು. ಎಲೆಕ್ರಿಸಿಟಿನೇ ಇರಲಿಲ್ಲಾ, ಏನೇನು ಇರಲಿಲ್ಲಾ. ಮೋದಿ ಬಂದಮೇಲೆನೇ ಎಲ್ಲಾ ಆಗಿದ್ದು ಎಂದು ಮೋದಿ ಬಗ್ಗೆ ಲೇವಡಿ ಮಾಡಿದರು.
ಸಬ್ ಕುಚ್ ಹಮ್ನೇ ಕಿಯಾ ಅಂತಾರೆ. ಈ ದೇಶದಲ್ಲಿ ಸೂಜೀನೂ ತಯಾರು ಆಗ್ತಿರಲಿಲ್ಲಾ. ಅಂತದ್ರಲ್ಲಿ ಆಕಾಶಕ್ಕೆ ಹೋಗೋ ರಾಕೆಟ್ ತಯಾರು ಮಾಡಿದ್ವಿ. ಆಗ 16% ಲಿಟರಸಿ ಇತ್ತು.. ಇಂದು 73% ಲಿಟರಸಿ ಇದೆ. ಇದೇನ್ ಮೋದಿ ಮಾಡಿದ್ದಾ? ಕಾಂಗ್ರೆಸ್ ಕರೆಪ್ಷನ್ ಅಂತೀರಾ? ಬಿಜೆಪಿ ಕರೆಪ್ಟ್ ಜನರನ್ನ ಪ್ರೊಟೆಕ್ಟ್ ಮಾಡ್ತಾರೆ. ಅಮಾಯಕರ ಮೇಲೆ ಇಡಿ ಐಟಿ ಬಿಡ್ತಾರೆ. ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಸಿಗುತ್ತೆ. ಎಲ್ಲೋಯ್ತು ನಿಮ್ಮ ಇಡಿ, ಐಟಿ, ಮಲಗಿದ್ಯಾ..? ಶಾ ಅವರೇ ನಿಮಗೇನ್ ಬೇರೆ ಕೆಲಸ ಇಲ್ವೇನೂ. ಇಡಿ ಐಟಿ ಎಲ್ಲಾ ಫೈನಾನ್ಸ್ ಡಿಪಾರ್ಟಮೆಂಟ್. ಅದನ್ನ ನೀವ್ಯಾಕೆ ತೆಗೆದುಕೊಂಡ್ರಿ. ಹೆದರಿಸಿ ಬೆದರಿಸಿ ಆಳೋ ಕೆಲಸ ಅವರು ಮಾಡ್ತಾರೆ. ಆದರೇ ಕಾಂಗ್ರೆಸ್ ಪಾರ್ಟಿ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಪಾರ್ಟಿ. ಬ್ರಿಟಿಷರಿಗೆ ಹೆದರಲಿಲ್ಲಾ.. ನಿಮಗೇನ್ ಹೆದರ್ತೀವಿ. ಪ್ರಜಾಪ್ರಭುತ್ವ ಉಳಿಸೋಕೆ ನೀವೆಲ್ಲಾ ಒಗ್ಗಟ್ಟಾಗಬೇಕು. ಬೂತ್ ಮಟ್ಟದಲ್ಲಿ ಮನೆಮನೆಗೆ ಹೋಗಿ ಇವರ ಕೆಟ್ಟ ಕೆಲಸ ಹೇಳಬೇಕು ಎಂದರು.
ಪಂಚಾಯ್ತಿ ಎಲೆಕ್ಷನ್ ಗೂ ಮೋದಿ, ಜಿಲ್ಲಾ ಪಂಚಾಯ್ತಿ ಎಲೆಕ್ಷನ್ ಗೂ ಮೋದಿ. ಎಂಎಲ್ ಎ, ಎಂಪಿ ಎಲೆಕ್ಷನ್ ಗೂ ಮೋದಿ. ಏನ್ ಮೋದಿ ಬಂದು ಇಲ್ಲಿ ಆಳ್ತಾನ. ಮೋದಿ ಏನ್ 51 % ಓಟ್ ತೆಗೆದುಕೊಂಡು ಅಧಿಕಾರಕ್ಕೆ ಬಂದಿಲ್ಲಾ. 60.3% ಜನರು ಅವರಿಗೆ ವಿರುದ್ದ ಇದ್ದಾರೆ. ಕೇಂದ್ರ ಸರ್ಕಾರದಲ್ಲಿ 30 ಲಕ್ಷ ನೌಕರಿ ಖಾಲಿ ಇದೆ. ಕರ್ನಾಟಕದಲ್ಲೇ 3 ಲಕ್ಷ ವೆಕೆನ್ಸಿ ಇದೆ. ಇದು ತುಂಬಿ ಮೊದಲು. ನಮ್ಮ ಕಾಲದಲ್ಲಿ ಪೆಟ್ರೋಲ್ 50, 60 ಇದ್ದಾಗ ಊರ್ ತುಂಬ ಹಚ್ಕೊಂಡು ತಿರುಗಾಡ್ತಿದ್ರು. ಈಗ ಇವರ ಕಾಲದಲ್ಲಿ ಎಷ್ಟಿದೆ.? ಈಗ ಬರೋ ಚುನಾವಣೆಯಲ್ಲಿ ಪ್ರಜಾಧ್ವನಿ ಯಶಸ್ವಿ, ವಿಜಯ ಆಗಬೇಕು. ಆಗ ರಾಜ್ಯದಲ್ಲಿ ಸುಖ, ಶಾಂತಿ, ಅಭಿವೃದ್ದಿ ಅನುಷ್ಠಾನ ಆಗುತ್ತೆ.
ಬಿಜೆಪಿ ಸಮಾಜದಲ್ಲಿ ಬಡವರಿಗೆ ಹೊಡೆಸ್ತಾ ಇದ್ದಾರೆ. ಜಾತಿ ಜಾತಿಗೆ ಜಗಳ ಹಚ್ತಾರೆ. ಅವರಿಗೆ ರಾಜ್ಯದ ಉದ್ದಾರ, ಕಲ್ಯಾಣ ಬೇಕಗಿಲ್ಲಾ. ಶಾಲೆಯಲ್ಲಿ ಯಾವ ಡ್ರೆಸ್ ಹಾಕಬೇಕು ಅದು ಏನ್ ಮಾಡ್ಬೇಕು ಅಂತಾರೆ. ಬಿಜೆಪಿಯನ್ನ ಕಿತ್ತೊಗೆಯಲು ಎಲ್ಲರೂ ಪಣ ತೊಡಬೇಕು ನಿರಂತರವಾಗಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಸಮಾವೇಶದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೊರಟಗೆರೆಗೆ ಇಂದು ಐತಿಹಾಸಿಕ ದಿನ. ಇಲ್ಲೊಂದು ಕಾಂಗ್ರೆಸ್ ಭವನ ಕಟ್ತೇವೆ, ಅದನ್ನ ಉದ್ಘಾಟಿಸಲು ಎಐಸಿಸಿ ಅಧ್ಯಕ್ಷರು ಬರ್ತಾರೆ ಅಂತಾ ನಾವ್ಯಾರು ಊಹೆ ಮಾಡಿರಲಿಲ್ಲಾ.
ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಕಾಂಗ್ರೆಸ್ ಭವನ ಕಟ್ಟಿಸಬೇಕು ಅಂತಾ ಸೋನಿಯಾಗಾಂಧಿ ಆದೇಶಿಸಿದ್ದರು. ಪ್ರತಿಯೊಬ್ಬ ಕಾರ್ಯಕರ್ತ ಈ ಕಟ್ಟಡಕ್ಕೆ ದೇಣಿಗೆ ನೀಡಿದ್ದಾನೆ. ಇದು ಕೆಪಿಸಿಸಿಯ ಸ್ವತ್ತು. ಭಾರತ ಇಂದು ಬಹಳ ದೊಡ್ಡದಾಗಿ ಬಲಿಷ್ಟವಾಗಿ ಬೆಳೆದಿದೆ. ಪ್ರಧಾನಿ ನಾನು ಹಂಗೆ ಮಾಡಿದ್ದೇನೆ ಹಿಂಗೆ ಮಾಡಿದ್ದೇನೆ ಅಂತಾ ಕೊಚ್ಚಿಕೊಳ್ತಾರೆ. ಆದರೆ ಅದಕ್ಕೆ ಅಡಿಪಾಯ ಹಾಕಿದವರು ಯಾರು. ಈ ಎಲ್ಲದಕ್ಕೂ ಭದ್ರ ಬುನಾದಿ, ಅಡಿಪಾಯ ಹಾಕಿದ್ದು ಕಾಂಗ್ರೆಸ್ ಪಕ್ಷ. ಇದನ್ನ ಬಿಜೆಪಿ ಪಕ್ಷ ಅರಿಯಬೇಕಿದೆ ಎಂದು ಬಿಜೆಪಿ ಟಾಂಗ್ ಕೊಟ್ಟರು.
ಎಲ್ಲಿ ನೋಡಿದ್ರು ಲಂಚ:
ಭ್ರಷ್ಟಾಚಾರ. ಎಲ್ಲೂ ಕೂಡ ಅಭಿವೃದ್ದಿ ಆಗ್ತಿಲ್ಲಾ. ಪೆಟ್ರೋಲ್, ಡಿಸೇಲ್, ಸಿಲೆಂಡರ್ ಜಾಸ್ತಿ ಆಯ್ತು. ಇದನ್ನ ನಿಲ್ಲಿಸೋದಕ್ಕೆ ನಿಮ್ಮ ಕೈಯಲ್ಲಿ ಆಗಲ್ಲಾ. ಶಾಸಕರನ್ನ ಕರೆದೊಯ್ದು ವಾಮಮಾರ್ಗದಲ್ಲಿ ಸರ್ಕಾರ ರಚಿಸಿ. ಭ್ರಷ್ಟ ಆಡಳಿತವನ್ನ ಕೊಡ್ತಾ ಇದ್ದಾರೆ. ಸಿಎಂ ನಿಂದ ಹಿಡಿದು ಎಲ್ಲಾ ಸಚಿವರು, ಶಾಸಕರು ಕೂಡ ಭ್ರಷ್ಟರು. ಏನ್ ಹೇಳಿದ್ರು ಪ್ರೂಫ್ ಕೊಡ್ಬೇಕು ಅಂತೀರಾ. ಮೊನ್ನೆ ಆಗಿದ್ದಕ್ಕಿಂತಾ ಪ್ರೂಫ್ ಬೇಕಾ ನಿಮಗೆ. ಸಿಎಂ ಬೊಮ್ಮಾಯಿ ಅವರೇ, ನಿಮಗೆ ನಾಚಿಕೆ ಆಗಲ್ವಾ. ನಿಮಗೇನಾದರು ಮಾನ ಮರ್ಯಾದೆ ಇದ್ಯಾ?
ತಕ್ಷಣ ನಾವು ರಾಜೀನಾಮೆ ಕೊಡ್ಬೇಕು. ನಡೀರಿ ಚುನಾವಣೆಗೆ ಹೋಗೋಣ. ಬಿಜೆಪಿಯ ಭ್ರಷ್ಟ ಸರ್ಕಾರನ್ನ ಕಿತ್ತೊಗಿಯಬೇಕು. ರಾಜೀವ್ ಗಾಂಧಿ ಹೆಸರಿನಲ್ಲಿ ಇಂದು ಸಂಕಲ್ಪ ಮಾಡಿ ಹೋಗಬೇಕು. ಐದು ವರ್ಷದಿಂದ ಪ್ರಾಮಾಣಿಕವಾಗಿ ಈ ಕ್ಷೇತ್ರವನ್ನ ಅಭಿವೃದ್ದಿ ಮಾಡಿದ್ದೇನೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಯಾಗಿ ನಿಲ್ಲಬೇಕು. ರಾಜಕಾರಣದಲ್ಲಿ ಖರ್ಗೆ ಅಂತವರು ಸಿಗೋದು ಬಹಳ ಅಪರೂಪ. ಸಾಮಾನ್ಯ ಕಾರ್ಯಕರ್ತನಾಗಿ ಇಂದು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಎಲ್ಲಾ ಅಧಿಕಾರದಲ್ಲು ಪ್ರಾಮಾಣಿಕ ದಕ್ಷ ಆಡಳಿತ ನಡೆಸಿದ್ದಾರೆ ಎಂದು ಖರ್ಗೆರವರ ಕಾರ್ಯವೈಖರಿಯನ್ನು ಕೊಂಡಾಡಿದರು.
ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿ, ಮನುಷ್ಯನ ಹುಟ್ಟು ಸಾವಿನ ನಡುವೆ ಮಾಡಿದ ಸಾಧನೆಗಳ ಸಾಕ್ಷಿಗುಡ್ಡೆ ಅತ್ಯಂತ ವಿಶೇಷ. ಆ ಕೆಲಸವನ್ನ ಪರಮೇಶ್ವರ್ ಮಾಡಿದ್ದಾರೆ. ಈ ನಾಯಕ ತನ್ನ ಜವಾಬ್ದಾರಿ ಅರೆತು ಸಮಾಜದ ಋಣ ತೀರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಸರ್ಕಾರ ತರುವಲ್ಲಿ ಅಂದು ಸಾಕಷ್ಟು ಶ್ರಮ ವಹಿಸಿದ್ದಾರೆ. ಒಂದು ಬಾರಿ ಯಾಮಾರಿದ್ದೀರಿ. ಇನ್ನೊಂದು ಬಾರಿ ಯಾಮಾರಬೇಡಿ. ನೂರಾರು ಶಾಸಕರು ಸಿಗ್ಬೋದು ಆದರೆ ಪರಮೇಶ್ವರ್ ಅಂತವರು ಸಿಗೋದಿಲ್ಲಾ. ಪರಮೇಶ್ವರ್ ಅವರು ಅಭಿವೃದ್ದಿಯಲ್ಲಿ ಹೃದಯ ಶ್ರೀಮಂತ ನಾಯಕ. ಅವರ ಜೊತೆ ನಾವೆಲ್ಲಾ ಇದ್ದೇವೆ ಅಂತಾ ಕೊರಟಗೆರೆ ಕ್ಷೇತ್ರದ ಜನತೆಗೆ ಹೇಳ್ತೇವೆ. ನಮ್ಮಂತ ಹತ್ತಾರು ಜನರ ನಾಯಕರನ್ನ ಬೆಳೆಸುವಂತಾ ಶಕ್ತಿ ಪರಮೇಶ್ವರ್ ಗೆ ಇದೆ ಎಂದು ಶಾಸಕ ಪರಮೇಶ್ವರ್ ರವರ ಸಾಧನೆಗಳನ್ನು ಕೊಂಡಾಡಿದರು.
ರೈತ ಬೆಳೆದ ಬೆಳೆಯನ್ನ ಡಬಲ್ ಮಾಡ್ತೇನೆ ಅಂತಾ ಡಬಲ್ ಇಂಜಿನ್ ಸರ್ಕಾರ ಹೇಳಿತ್ತು. ಆದರೇ ರೈತನ ಯಾವುದೇ ಸಮಸ್ಯೆಗೆ ಪರಿಹಾರ ಕೊಡಲಿಲ್ಲಾ. ಕೊರೋನಾದಲ್ಲಿ ಲಕ್ಷಾಂತರ ಜನರ ಹೆಣವನ್ನ ನೋಡಿದ್ರಿ. ಯಾರಿಗೂ ಈ ಸರ್ಕಾರ ಪರಿಹಾರ ಕೊಡಲಿಲ್ಲಾ.
20 ಲಕ್ಷ ಕೋಟಿ ಹಣ ನೀಡಿದ್ದೇವೆ ಅಂತಾ ನಿರ್ಮಲ ಸೀತಾರಾಮನ್ ಹೇಳಿದ್ರಲ್ಲಾ. ಯಾರಿಗಾದ್ರೂ ಹಣ ಬಂದಿದ್ಯಾ. ಯಾವ ಮುಖ ಇಟ್ಕೊಂಡು ಮತ ಕೇಳೋಕೆ ಬರ್ತಾರೆ. ಅದಕ್ಕೆ ಇವರ ಪಾಪದ ಪುರಾಣವನ್ನ ಬಿಡುಗಡೆ ಮಾಡಿದ್ದೇವೆ. ಮತ್ತೇ ಬಿಜೆಪಿ ಸರ್ಕಾರ ಬರೋದಕ್ಕೆ ಸಾಧ್ಯಾನಾ..? ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೇ ಸಾಕ್ಷಿ ಕೊಡಿ ಅಂದ್ರಲ್ಲಾ. ಇವತ್ತು ಮಾಡಾಳ್ ವಿರೂಪಾಕ್ಷಪ್ಪ ಕೊಟ್ಟಿದ್ದಾನಲ್ಲಾ. ಮಾ.9 ನೇ ತಾರೀಖು 2 ಗಂಟೆಗಳ ಕಾಲ ಬಂದ್ ಆಚರಿಸಬೇಕು. ಬೆಳಗ್ಗೆ 9 ರಿಂದ 11 ಗಂಟೆ ವರೆಗೂ ಬಂದ್ ಆಚರಿಸೋ ಮೂಲಕ ಈ ಭ್ರಷ್ಟ ಸರ್ಕಾರವನ್ನ ಕಿತ್ತೊಗೆಯಬೇಕು. ಅಂದು ಎಲ್ಲರೂ ಬೀದಿಗಳಿದು ಹೋರಾಟ ಮಾಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರು ಡಾ.ಎಂ.ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಧ್ಯಕ್ಷಗಳು ಸತೀಶ್ ಜಾರಕಿಹೊಳಿ ಮತ್ತು ಸಲಿಂ ಅಹಮದ್, ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಚಂದ್ರಶೇಖರ ಗೌಡ, ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ರವಿಕುಮಾರ ರಾಯಸಂದ್ರ, ರಾಜ್ಯದ, ಜಿಲ್ಲೆಯ, ಮತ್ತು ತಾಲೂಕಿನ ವಿವಿಧ ಮುಖಂಡರುಗಳು, ಹಾಗೂ ಕಾರ್ಯಕರ್ತರುಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಂಡಿತು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA