ತುಮಕೂರು: ಜಿಲ್ಲೆಯಲ್ಲಿ ಇಂದು ಒಟ್ಟು 11 ವಿಧಾನಸಭಾ ಕ್ಷೇತ್ರಗಳಲ್ಲಿ 11 ನಾಮಪತ್ರಗಳು ಸ್ವೀಕೃತಗೊಂಡಿವೆ. ಈ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವುದು ಗಮನಾರ್ಹವಾಗಿದೆ.
ಮುಖ್ಯವಾಗಿ ಇಂದು ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂದಿದ್ದರಿಂದ ಅವರ ಸಮ್ಮುಖದಲ್ಲಿಯೇ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿತ್ತು. ಆದ್ರೆ ಕುಮಾರಸ್ವಾಮಿ ಬರುವುದು ತಡವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪೂರ್ವ ನಿಗದಿಯಂತೆ ನಾಮಪತ್ರಗಳನ್ನು ಸಲ್ಲಿಸಿದರು.
ಅದರಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಪಕ್ಷದಿಂದ ಸಿ.ಬಿ.ಸುರೇಶ್‍ಬಾಬು ಅವರು 1 ನಾಮಪತ್ರ ಸಲ್ಲಿಸಿದ್ದರು. ಇಲ್ಲಿ ಕಾಂಗ್ರೆಸ್ ನಿಂದ ಕೆ.ಎಸ್. ಕಿರಣ್ ಕುಮಾರ್ ಮತ್ತು ಬಿಜೆಪಿಯಿಂದ ಮಾಜಿ ಸಚಿವ ಮಾಧುಸ್ವಾಮಿ ನಾಮಪತ್ರ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ.
ಇನ್ನು ತಿಪಟೂರು ವಿಧಾನಸಭೆ ಕ್ಷೇತ್ರಕ್ಕೆ ಜನತಾದಳ(ಜಾತ್ಯತೀತ) ಪಕ್ಷದಿಂದ ಕೆ.ಟಿ. ಶಾಂತಕುಮಾರ ಅವರು 1 ನಾಮಪತ್ರ ಸಲ್ಲಿಸಿದರು. ಇಲ್ಲಿ ಬಿಜೆಪಿಯಿಂದ ಸಚಿವ ಬಿ.ಸಿ. ನಾಗೇಶ್ ಸ್ಪರ್ಧಿಸುತ್ತಿದ್ದಾರೆ.
ತುರುವೇಕೆರೆ ವಿ.ಸ.ಕ್ಷೇತ್ರಕ್ಕೆ ಜನತಾದಳ ಜಾತ್ಯಾತೀತದಿಂದ ಎಂ.ಟಿ.ಕೃಷ್ಣಪ್ಪ 1 ನಾಮಪತ್ರ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಾಮ್ ಪ್ರಸಾದ್ ಅವರು 2 ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ಶಾಸಕ ಮಸಾಲೆ ಜಯರಾಂ ಸ್ಪರ್ಧಿಸಲಿದ್ದಾರೆ.
ಕೊರಟಗೆರೆ ವಿ.ಸ.ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಪಕ್ಷದಿಂದ ಪಿ.ಆರ್.ಸುಧಾಕರಲಾಲ್ ಅವರು 1 ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ನಿಂದ ಡಾ.ಜಿ. ಪರಮೇಶ್ವರ್, ಬಿಜೆಪಿಯಿಂದ ಅನಿಲ್ ಅವರುಗಳು ನಾಮಪತ್ರ ಸಲ್ಲಿಕೆಗೆ ಸಿದ್ದತೆ ನಡೆಸಿದ್ದಾರೆ. ಇಂದು ಉತ್ತಮ ಪ್ರಜಾಕೀಯ ಪಕ್ಷದಿಂದ ನಾಗೇಂದ್ರ ಟಿ.ಎನ್. ಅವರು ಇಂದು 1 ನಾಮಪತ್ರ ಸಲ್ಲಿಸಿದ್ದಾರೆ.
ಕುಣಿಗಲ್ ವಿ.ಸ.ಕ್ಷೇತ್ರಕ್ಕೆ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ತುಮಕೂರು ನಗರ ವಿ.ಸ.ಕ್ಷೇತ್ರಕ್ಕೆ ಸೋಷಿಯಾಲಿಸ್ಟಿಕ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಎಂ.ವಿ. ಕಲ್ಯಾಣಿ ಅವರು 1 ನಾಮಪತ್ರ ಸಲ್ಲಿಸಿದ್ದಾರೆ. ತುಮಕೂರು ಗ್ರಾಮಾಂತರ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ.
ಗುಬ್ಬಿ ವಿ.ಸ.ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರವೀಣ್ ಎಸ್.ಆರ್. 1 ನಾಮಪತ್ರ ಸಲ್ಲಿಸಿದ್ದಾರೆ. ಶಿರಾ ವಿ.ಸ.ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ರಂಗನಾಥ ಅವರು 1 ನಾಮಪತ್ರ, ಆಮ್ ಆದ್ಮಿ ಪಕ್ಷದಿಂದ ಶಶಿಕುಮಾರ್ ಆರ್. ಅವರು 1 ನಾಮಪತ್ರ ಸಲ್ಲಿಸಿದ್ದಾರೆ.ಪಾವಗಡ ವಿ.ಸ.ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ. ಮಧುಗಿರಿ ವಿ.ಸ.ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy