ಬಹಿರ್ದೆಸೆಗೆ ಹೋಗಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ತುಮಕೂರಿನ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ (ಪೋಕ್ಸೋ) 30 ವರ್ಷಗಳ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
10ನೇ ತರಗತಿಯಲ್ಲಿ ಓದುತ್ತಿದ್ದ ಸಂತ್ರಸ್ತ ಬಾಲಕಿಯು ತನ್ನ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ ಹೊರಗಡೆ ಬಹಿರ್ದೆಸೆಗೆ ಹೋಗುತ್ತಿದ್ದಳು. ಇದೇ ಗ್ರಾಮದ ನಿವಾಸಿಯಾದ ಅಪರಾಧಿ ಹನುಮಂತ ಎಂಬಾತ ಮದುವೆಯಾಗಿ ಮೂವರು ಮಕ್ಕಳಿದ್ದರೂ ಕೂಡ, ಪ್ರಜ್ಞಾವಂತನಾಗಿ ನಡೆದುಕೊಳ್ಳದೇ, ಬಾಲಕಿ ಬಹಿರ್ದೆಸೆಗೆ ಹೋಗುತ್ತಿದ್ದಾಗ, ಹಿಂಬಾಲಿಸುವುದು, ಮರೆಯಲ್ಲಿ ನಿಂತು ನೋಡುತ್ತಿರುವಂತಹ ಕೃತ್ಯ ನಡೆಸಿದ್ದ. ಈ ಬಗ್ಗೆ ಬಾಲಕಿಯು ತನ್ನ ಪೋಷಕರಿಗೆ ವಿಚಾರ ತಿಳಿಸಿದ್ದರು. ಬಾಲಕಿಯ ಪೋಷಕರು ಹನುಮಂತರಾಯನ ತಂದೆ ತಾಯಿಗೆ ಈ ವಿಚಾರ ತಿಳಿಸಿ, ಮಗನಿಗೆ ಬುದ್ಧಿ ಹೇಳುವಂತೆ ಕೇಳಿ ಕೊಂಡಿದ್ದರು.
ಇದಾದ ನಂತರ 05–12–2021ರಂದು ಮಧ್ಯಾಹ್ನ 1:30 ಗಂಟೆಗೆ ನೊಂದ ಬಾಲಕಿಯು ದೊಡ್ಡರಾಮಣ್ಣ ಎಂಬವರ ಜಮೀನಿಗೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಏಕಾಏಕಿ ಅಲ್ಲಿಗೆ ಬಂದ ಹನುಮಂತರಾಯ ಬಾಲಕಿಯನ್ನು ಎಳೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದು, ಈ ವಿಚಾರ ಯಾರಿಗಾದರೂ ಹೇಳಿದರೆ, ಸಾಯಿಸುವುದಾಗಿ ಬೆದರಿಕೆ ಹಾಕಿದ್ದನು. ನೊಂದ ಬಾಲಕಿ ಆತನ ಬಳಿಯಿಂದ ತಪ್ಪಿಸಿಕೊಂಡು ಬಂದು ನಡೆದ ಘಟನೆಯನ್ನು ತಂದೆ ತಾಯಿಗೆ ತಿಳಿಸಿದ್ದಳು. ಈ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿಗಳಾದ ಸರ್ ದಾರ್ ಎಂ.ಎಸ್. ಅವರು ನ್ಯಾಯಾಲಯಕ್ಕೆ ಪೋಕ್ಸೋ ಕಾಯ್ದೆಯಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದರು.
ವಿಚಾರಣೆಯಲ್ಲಿ ಅಪರಾಧಿ ಹನುಮಂತರಾಯ ಕೃತ್ಯ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಘನ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾರಾವ್ ಪಿ. ಅವರು ಅಪರಾಧಿಗೆ 30 ವರ್ಷಗಳ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 6 ಲಕ್ಷ ರೂಪಾಯಿ ಪರಿಹಾರ ಹಾಗೂ ದಂಡದ ಮೊತ್ತದಲ್ಲಿ 1.45000 ರೂಪಾಯಿ ಸೇರಿಸಿ ಒಟ್ಟು 7.45 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ತೀರ್ಪು ನೀಡಿದ್ದು, ನೊಂದ ಬಾಲಕಿಗೆ ನ್ಯಾಯ ನೀಡಿದೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ಅವರು ವಾದ ಮಂಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy