-
ಕರ್ತವ್ಯ ಪಾಲಿಸದ ತಾ.ಪಂ.ಕಾರ್ಯನಿರ್ವಹಕ ಅಧಿಕಾರಿಗೆ 10 ಸಾವಿರ ದಂಡ
-
ಕೋಳಾಲ ಗ್ರಾ.ಪಂ. ಪಿಡಿಓಗೆ 10 ಸಾವಿರ ದಂಡ, ಕ್ರಿಮಿನಲ್ ಪ್ರಕರಣ ದಾಖಲಿಸಲು ಶಿಫಾರಸು
ವರದಿ: ಶಿವಕುಮಾರ್, ಮೇಷ್ಟ್ರುಮನೆ
ತುಮಕೂರು: ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ, ಪಿಡಿಓ, ವಾಟರ್ ಮ್ಯಾನ್ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ ವೇರ್ ಎಂಬ ಅಂಗಡಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಸಾರ್ವಜನಿಕ ಕುಂದುಕೊರತೆಗಳ ಪ್ರಾಧಿಕಾರ ಆದೇಶ ನೀಡಿದೆ.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಕ್ರಮ ಎಸಗಿರುವ ಬಗ್ಗೆ ವಕೀಲರಾದ ಎಂ.ಎನ್.ಚಿನ್ಮಯ ಅವರು ಸಾರ್ವಜನಿಕ ಕುಂದುಕೊರತೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆಯಲ್ಲಿ ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಕಮಲಮ್ಮ, ಪಿಡಿಒ ಕೋಮಲ, ವಾಟರ್ ಮ್ಯಾನ್ ಕರಿಯಣ್ಣ, ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಲೆಕ್ಟ್ರಿಕಲ್ಸ್ ಮತ್ತು ಮತ್ತು ಹಾರ್ಡ್ ವೇರ್ ಅಂಗಡಿ ಬೋಗಸ್ ಬಿಲ್ ಮೂಲಕ ಸರ್ಕಾರವನ್ನು ವಂಚಿಸಿರುವುದು ರುಜುವಾತಾದ ಕಾರಣ ಇವರ ವಿರುದ್ಧ ಸೂಕ್ತ ಕ್ರಮಕ್ಕೆ ಕೈಗೊಳ್ಳಲು ಆದೇಶಿಸಲಾಗಿದೆ.
ಈ ಪ್ರಕರಣದ ಬಗ್ಗೆ ನಮ್ಮತುಮಕೂರು ವಾಹಿನಿ ಜೊತೆಗೆ ಮಾಹಿತಿ ಹಂಚಿಕೊಂಡ ವಕೀಲರಾದ ಎಂ.ಎನ್.ಚಿನ್ಮಯ ಅವರು, ಈ ಪ್ರಕರಣದ ಬಗ್ಗೆ ಸುದೀರ್ಘವಾದ ವಿಚಾರಣೆಯು ಸಾರ್ವಜನಿಕ ಕುಂದುಕೊರತೆಗಳ ಪ್ರಾಧಿಕಾರ ತುಮಕೂರು ಕಾರ್ಯಾಲಯದಲ್ಲಿ ನಡೆಯಿತು. ಕೋಳಾಲ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷರು ಹಾಗೂ ಪಿಡಿಓ ಲಕ್ಷ್ಮೀ ವೆಂಕಟೇಶ್ವರ ಎಲೆಕ್ಟ್ರಿಕಲ್ ಅಂಗಡಿ ಇವರು ಜೊತೆಯಾಗಿ ಬೀದಿ ದೀಪ ಖರೀದಿ ಮಾಡ್ತೇವೆ ಎಂದು ಎಲ್ಲ ಬೋಗಸ್ ಬಿಲ್ ಗಳನ್ನು ಸೃಷ್ಟಿಸಿ, ಹಣವನ್ನು ವರ್ಗಾವಣೆ ಮಾಡಿಕೊಂಡು ಯಾವುದೇ ಬೀದಿ ದೀಪ ಖರೀದಿ ಮಾಡದೇ, 22 ಲಕ್ಷ ರೂಪಾಯಿ ಹಣ ದುರುಪಯೋಗ ಮಾಡಲಾಗಿದೆ ಎಂದರು.
ಪ್ರಕರಣ ಸಂಬಂಧ ಜಿಲ್ಲಾ ಪಂಚಾಯತ್ ವತಿಯಿಂದ ಸೂಕ್ತವಾದ ಲೆಕ್ಕ ಪರಿಶೋಧನೆ ತಂಡ ನೇಮಕವಾಗಿ ಅವರು ಕೂಡ ಒಂದು ವರದಿ ಕೊಟ್ಟರು. ಈ ವರದಿಗೆ ಸಂಬಂಧಿಸಿದಂತೆ ವಿಚಾರಣೆ ನಡೆದು. ಬೋಗಸ್ ಬಿಲ್ ಸೃಷ್ಠಿಸಿರುವುದು ಸಾಬೀತಾದ ಕಾರಣ, ತೀರ್ಪು ಪ್ರಕಟವಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳದೇ ಗ್ರಾಮ ಪಂಚಾಯತ್ ಅನುಮೋದನೆ ಇಲ್ಲದೇ, ಖರೀದಿ ಮತ್ತು ನಿರ್ವಹಣೆಯಲ್ಲಿ ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಬಿಲ್ ಗಳಿಲ್ಲದೇ ವೆಚ್ಚ ಮಾಡಿರುವ 12,01,851 ರೂಪಾಯಿಗಳನ್ನು ಪಿಡಿಒ ಅವರಿಂದ ವಸೂಲಾತಿ ಮಾಡಿ, ಸಂಬಂಧ ಪಟ್ಟ ನಿಧಿಗೆ ಜಮಾ ಮಾಡಲು ಪ್ರಾಧಿಕಾರವು ಶಿಫಾರಸು ಮಾಡಿದೆ. ಕರ್ತವ್ಯ ಲೋಪ, ಹಣ ದುರ್ಬಳಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿಲ್ ಪ್ರಕರಣ ದಾಖಲಿಸುವಂತೆ ಸಿಇಒ ಮೂಲಕ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಪಿಡಿಒಗೆ ತಲಾ 10 ಸಾವಿರ ದಂಡ ಹಾಗೂ ಇವರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸಲಾಗಿದೆ. ಅಧಿಕಾರ ದುರ್ಬಳಕೆಗೆ ಸಹಕಾರ ನೀಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ, ವಾಟರ್ ಮ್ಯಾನ್, ಎಲೆಕ್ಟ್ರಿಕ್ ಅಂಗಡಿ ವಿರುದ್ಧ ಕ್ರಮ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆಯ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದ ಪತಿ ಕರಿಯಣ್ಣ ಕ್ರಮಕ್ಕೆ ಆದೇಶಿಸಲಾಗಿದೆ.
ಅಂಗಡಿಯವನು ಯಾವುದೇ ಬೀದಿ ದೀಪಗಳನ್ನು ಮಾರಾಟ ಮಾಡದೇ ಲಕ್ಷಾಂತರ ಹಣವನ್ನು ವರ್ಗಾವಣೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಆತನನ್ನು ಕಪ್ಪು ಪಟ್ಟಿಗೆ ಸೇರಿಸ ಬೇಕು ಹಾಗೂ ಕಾನೂನು ಕ್ರಮಕೈಗೊಳ್ಳಬೇಕು. ವಾಣಿಜ್ಯ ತೆರಿಗೆ ಇಲಾಖೆಯವರಿಗೆ ಇದಕ್ಕೆ ಸಂಬಂಧಪಟ್ಟ ವರದಿಯನ್ನು ಕಳುಹಿಸಿ, ಸಂಬಂಧಪಟ್ಟ ಅಂಗಡಿಯವರ ಮೇಲೆ ಸೂಕ್ತಕ್ರಮಕ್ಕೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದಿನ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾದ ಶಿವಪ್ರಕಾಶ್ ಅವರು, ಸರಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿನಿಯಮದಡಿಯಲ್ಲಿ ಗ್ರಾಮ ಪಂಚಾಯತ್ ಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ವಿಫಲರಾಗಿ ಕರ್ತವ್ಯ ಲೋಪ ನಿರ್ಲಕ್ಷ್ಯಗಳನ್ನು ತೋರಿರುವುದನ್ನು ಪರಿಗಣಿಸಿ ಕಾರ್ಯನಿರ್ವಹಣಾಧಿಕಾರಿಗೆ 10 ಸಾವಿರ ದಂಡ ವಿಧಿಸಿ ಇವರ ವಿರುದ್ಧ ಶಿಸ್ತು ಕ್ರಮ ಜರಗಿಸಲು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಶಿಫಾರಸು ಮಾಡಿದ್ದಾರೆ ಎಂದವರು ತಿಳಿಸಿದರು.
ಎಸ್ ಸಿಪಿ/ ಟಿಎಸ್ ಪಿ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ವಾರ್ಡ್ ಸಭೆ, ಗ್ರಾಮ ಸಭೆಗಳನ್ನು ಮಾಡಿ ಆಯ್ಕೆ ಮಾಡದೇ, ಅಧಿಕಾರ ದುರುಪಯೋಗಪಡಿಸಿಕೊಂಡು, ತನ್ನ ಮಗಳಿಗೆ 5 ಸಾವಿರ ರೂಪಾಯಿಗಳನ್ನು ವಿದ್ಯಾಭ್ಯಾಸಕ್ಕಾಗಿ ಪಡೆದಿರುವುದು. ನಿಯಮ ಬಾಹಿರವಾಗಿರುವುದರಿಂದ ಸದರಿ 5 ಸಾವಿರ ರೂಪಾಯಿಗಳನ್ನು ಸಂಬಂಧ ಪಟ್ಟ ಖಾತೆ ಜಮಾ ಮಾಡಲು ಪ್ರಾಧಿಕಾರ ಆದೇಶಿಸಿದೆ.
ಗ್ರಾ.ಪಂ. ಅಧ್ಯಕ್ಷೆ ಪತಿ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು, ವಿಚಾರಣೆಯಲ್ಲಿ ಕಂಡು ಬಂದ ಕಾರಣ ಸದರಿ ಕರಿಯಪ್ಪ ಇವರ ಮೇಲೆ ಸೂಕ್ತ ಶಿಸ್ತಿನ ಕ್ರಮಕ್ಕೆ ಪ್ರಾಧಿಕಾರವು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಣಾಧಿಕಾರಿಗೆ ಶಿಫಾರಸು ಮಾಡಿದೆ ಎಂದು ಅವರು ಮಾಹಿತಿ ನೀಡಿದರು.
ಈ ಹೋರಾಟ ಹತ್ತಿಕ್ಕಲು ಸಾಕಷ್ಟು ಪ್ರಯತ್ನಗಳಾಯ್ತು, ನನ್ನ ಮೇಲೆ ವೈಯಕ್ತಿಕ ದಾಳಿಯಾಯಿತು, ಸುಳ್ಳು ಪ್ರಕರಣ ದಾಖಲಿಸುವ ಯತ್ನಗಳು ನಡೆದವು, ಲೆಕ್ಕ ಪರಿಶೋಧನಾ ತಂಡ ಬಂದಾಗ ಇಡೀ ಗ್ರಾಮ ಪಂಚಾಯತ್ ನ ವಾಟರ್ ಮ್ಯಾನ್ ಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನಪಟ್ಟರು. ಈ ಎಲ್ಲದಕ್ಕೂ ಈ ತೀರ್ಪಿನ ಮೂಲಕ ಉತ್ತರ ಈಗ ಸಿಕ್ಕಿದೆ. ಈ ಪ್ರಕರಣಕ್ಕೆ ನಮ್ಮ ಜಿಲ್ಲಾ ತಂಡ ಹಾಗೂ ನಮ್ಮ ಸ್ನೇಹಿತರು ಕೂಡ ಸಹಕರಿಸಿದ್ದಾರೆ. ಸಾಮಾಜಿಕ ಹೋರಾಟಗಾರರಾದ ಹಂದ್ರಾಳ್ ನಾಗಭೂಷಣ್ ಮಾರ್ಗದರ್ಶನ ನೀಡಿದ್ದರು. ವಕೀಲರಾದ ಶೇಖರ್, ಎಂ.ಎಸ್.ಗಣೇಶ್, ಮೋಹನ್, ಕೆ. ಪದ್ಮನಾಭನ್, ಶಿವಕುಮಾರ್ ರೈತರ ಪಾಳ್ಯ ಇವರು ಹೋರಾಟಕ್ಕೆ ಸಹಕಾರ ನೀಡಿದ್ದರು. ಇವರಲ್ಲದೇ ಸಾಕಷ್ಟು ಜನರು ಈ ಹೋರಾಟಕ್ಕೆ ಕೈ ಜೋಡಿಸಿದ್ದರು. ಇದು ನನ್ನ ಏಕಾಂಗಿ ಹೋರಾಟ ಅಲ್ಲ, ಸಾಮೂಹಿಕ ಹೋರಾಟ. ಭ್ರಷ್ಟರಿಗೆ ಈ ಪ್ರಕರಣ ಒಂದು ಎಚ್ಚರಿಕೆಯ ಗಂಟೆ. ಈ ಹೋರಾಟವನ್ನು ಇನ್ನೂ ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy