ತುರುವೇಕೆರೆ: ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳಿಂದ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ತುಂಬಾ ತೊಂದರೆ ಆಗುತ್ತಿದ್ದು , ಇದಕ್ಕೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಉತ್ತರಿಸಬೇಕಾಗಿದೆ ಎಂದು ತಾಲ್ಲೂಕು ಛಲವಾದಿ ಮಹಾಸಭಾ ಮುಖಂಡ ಕುಣಿಕೇನಹಳ್ಳಿ ಜಗದೀಶ್ ಆಗ್ರಹಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಮತ್ತು ನಿರ್ಲಕ್ಷ ಹಾಗೂ ಅವ್ಯವಹಾರಗಳ ಬಗ್ಗೆ ಬೆಳಕು ಚಲ್ಲುವ ಪ್ರಕರಣಗಳು ನಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆ ಇರುವುದು ಬಡವರಿಗೆ ಅನುಕೂಲವಾಗಲೆಂದು, ಆದರೆ ಇಲ್ಲಿ ನಿರ್ಲಕ್ಷ್ಯ ಮತ್ತು ಅವ್ಯವಹಾರ ಬಗ್ಗೆ ದಲಿತರು ದ್ವನಿ ಎತ್ತಲೇ ಬೇಕಾಗಿದೆ ಎಂದು ಕರೆ ನೀಡಿದರು.
ಕಾರಣ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ಮುರುಳಿಯವರ ಮೇಲಿನ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೇಲಿನದು ಆರೋಪವಾ ಅಥವಾ ಷಡ್ಯಂತ್ರವ ಎನ್ನುವ ಬಗ್ಗೆ ನಾವು ವಿಚಾರ ಮಾಡಬೇಕಾಗಿದೆ. ಕೇವಲ ಇವರನ್ನು ಈ ವಿಚಾರದಲ್ಲಿ ಸಿಕ್ಕಿಸಿ ಅವರನ್ನು ತೇಜೋವಧೆ ಮಾಡಬೇಕೆನ್ನುವುದು, ಷಡ್ಯಂತ್ರ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ , ಇಲ್ಲಿ ಧ್ವನಿ ಎತ್ತುತ್ತಿರುವುದು ಕೇವಲ ಛಲವಾದಿ ಮಹಾಸಭಾ ಮಾತ್ರ. ನಮ್ಮ ವಿನಂತಿ ಏನೆಂದರೆ ಈ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ವೈದ್ಯರುಗಳು ಖಾಸಗಿ ಆಸ್ಪತ್ರೆಯನ್ನು ನಡೆಸುತಿದ್ದು, ಎಲ್ಲ ವೈದ್ಯರುಗಳು ಅಕ್ರಮ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಬಳಿ ಆಧಾರಗಳಿವೆ ಎಂದು ಆರೋಪಿಸಿದರು.
ಇನ್ನು ಆಸ್ಪತ್ರೆಯಲ್ಲಿನ ಹಗರಣಗಳನ್ನು ಪ್ರಸ್ತಾಪಿಸಿ, 5 ರೂ. ನೋಂದಣಿ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದರ ಖರ್ಚು ವೆಚ್ಚವನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಬಹಿರಂಗಪಡಿಸುತ್ತಿಲ್ಲ. ಬಾಣಂತಿಯರಿಗೆ ಉಚಿತ ಊಟವನ್ನು ಸರ್ಕಾರ ಕೊಡುತ್ತಿದೆ. ಆದರೆ, ಇಲ್ಲಿ ಕೊಡುತ್ತಿಲ್ಲ. ಇದರ ಬಗ್ಗೆ ಸ್ಪಷ್ಟನೆಯನ್ನು ಅವರು ಕೊಡಬೇಕಾಗುತ್ತದೆ ಹಾಗೂ ಹೊಣೆಯನ್ನು ಹೊರಬೇಕಾಗುತ್ತದೆ. ಇದಕ್ಕೆ ಸರ್ಕಾರದಿಂದ ಅನುದಾನ ಬರುತ್ತಿದ್ದು, ಅದೂ ಕೂಡಾ ಹಗರಣವಾಗಿದೆ ಮತ್ತೆ ರಕ್ತ ಪರೀಕ್ಷೆಗಳನ್ನು ಆಸ್ಪತ್ರೆಯಲ್ಲಿ ಸೌಲಭ್ಯವಿದ್ದರೂ ಸಹ ಸರ್ಕಾರ ಲಕ್ಷಾಂತರ ರೂ.ಗಳ ಯಂತ್ರೋಪಕರಣಗಳನ್ನು ಒದಗಿಸಿದ್ದರೂ ಸಹ ಖಾಸಗಿಯವರ ಜೊತೆ ಕೈಜೋಡಿಸಿ ಪರೀಕ್ಷೆಗಳನ್ನು ಹೊರಗೆ ಮಾಡಿಸಲು ಹೇಳುತ್ತಿರುವುದು ಇವರ ಅಕ್ರಮಗಳಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಪರೀಕ್ಷೆ ಮಾಡಲು ಪ್ರಯೋಗ ಶಾಲೆಗೆ ಕಚ್ಚಾ ವಸ್ತುಗಳನ್ನು ಖರೀದಿ ಮಾಡದೆ ಅಕ್ರಮವೆಸಗಿದ್ದಾರೆ. ಇದರಲ್ಲಿ ಆಡಳಿತ ವೈದ್ಯಾಧಿಕಾರಿಗಳ ನೇರ ಕೈವಾಡವಿದೆ. ಅಲ್ಲದೇ ಆಕ್ಸಿಜನ್ ಪ್ಲಾಂಟ್ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದ್ದು, ಇದರ ಹೊಣೆಯನ್ನು ಆಡಳಿತ ವೈದ್ಯಾಧಿಕಾರಿಗಳೆ ಹೊರಬೇಕಾಗಿದೆ ಎಂದು ಹೇಳಿ, ಇವೆಲ್ಲ ಅಕ್ರಮಗಳ ರೂವಾರಿ ಇವರೇ ಆಗಿರುವುದರಿಂದ ಇವರನ್ನು ಲೋಕಾಯುಕ್ತ ಅಥವಾ ಸಿಬಿಐನಿಂದ ಸೂಕ್ತ ತನಿಖೆಮಾಡಬೇಕೆಂದು ಛಲವಾದಿ ಮಹಾಸಭಾ ಆಗ್ರಹಪಡಿಸುತ್ತದೆ ಎಂದರು.
ದಲಿತ ವೈದ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು, ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದ ಅವರು, ಇಂತಹ ಘಟನೆಗಳನ್ನು ನೋಡಿದಾಗ ಆಡಳಿತ ವೈದ್ಯಾಧಿಕಾರಿಗೆ ಆಸ್ಪತ್ರೆಯ ಮೇಲೆ ಹಿಡಿತ ವಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆಸ್ಪತ್ರೆಯಲ್ಲಿ ವೈದ್ಯರುಗಳ ಕೊರತೆ ಎದ್ದು ಕಾಣುತಿದ್ದು, ಮುಖ್ಯವಾಗಿ ಕಣ್ಣಿನ ವೈದ್ಯರು ಲಭ್ಯವಿಲ್ಲ ಇವರು ಕೆಲಸಕ್ಕೆ ಹಾಜರಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಶಂಕಿಸಿದರು.
ಡಾ.ಮುರುಳಿಯವರನ್ನು ಇಲಾಖಾ ತನಿಖೆಯನ್ನು ನಡೆಸಿ ಅವರನ್ನು ತಪ್ಪಿತಸ್ಥರನ್ನಾಗಿಸುವುದು ಇವರ ಹುನ್ನಾರವಾಗಿದೆ, ಇದನ್ನು ತಾಲ್ಲೂಕು ಛಲವಾದಿ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ ಹಾಗೂ ಅವರಿಗೆ ಅನ್ಯಾಯವಾದಲ್ಲಿ ತೀವ್ರವಾದ ಹೋರಾಟಕ್ಕೂ ಸಿದ್ಧವಿದೆ ಎಂದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಡೊಂಕಿಹಳ್ಳಿ ರಾಮಣ್ಣ, ಪುರ ರಾಮಚಂದ್ರ , ಹೆಗ್ಗೆರೆ ನರಸಿಂಹಯ್ಯ,ಮಹದೇವಣ್ಣ. ಲೋಕೇಶ್ ಕುಣಿಕೇನಹಳ್ಳಿ. ಶ್ರೀನಿವಾಸ್ ,ಸುರೇಶ ಕುಣಿಕೇನಹಳ್ಳಿ . ಕೃಷ್ಣಮೂರ್ತಿ. ಪುಟ್ಟರಾಜು, ಪ್ರಸನ್ನ ಕಲ್ಲಬೊರನಹಳ್ಳಿ ತಿಮ್ಮಣ್ಣ ,ಬಾಳೆಕಾಯಿ ಶೇಕರ್, ಶ್ರೀನಿವಾಸ್ ಲೋಕೇಶ್, ಕುಣಕೇನಹಳ್ಳಿ ಲೋಕೇಶ್ ಮತ್ತಿತರರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA